ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪರ ವಾದಿಸಿ, ಜಾಮೀನು ಕೊಡಿಸಿದ್ದ ವಕೀಲ ಡಿ ಚಂದ್ರೇಗೌಡ ಅವರನ್ನು ಕಾಂಗ್ರೆಸ್ ಉಚ್ಚಾಟನೆ ಮಾಡಿದೆ.
ವಕೀಲ ಚಂದ್ರೇಗೌಡ ಅವರು ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿದ್ದರು. ಅವರನ್ನು ಅಧ್ಯಕ್ಷ ಸ್ಥಾನದಿಮದ ಉಚ್ಚಾಟನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ಅವರು ಶ್ರೀರಂಗಪಟ್ಟಣದಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಐಪಿಸಿ ಸೆಕ್ಷನ್ 354, 294, 509, 506, 153A, 295 295A, 298 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜಾಮೀನು ಕೋರಿ ಪ್ರಭಾಕರ್ ಭಟ್ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಭಾಕರ್ ಭಟ್ ಪರವಾಗಿ ಡಿ ಚಂದ್ರೇಗೌಡ ವಾದ ಮಂಡಿಸಿದ್ದರು. ನ್ಯಾಯಾಲಯ ಪ್ರಭಾಕರ್ ಭಟ್‌ಗೆ ಜಾಮೀನು ನೀಡಿತ್ತು.
ಈ ಬೆನ್ನಲ್ಲೇ ಚಂದ್ರೇಗೌಡ ವಿರುದ್ಧ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಪಕ್ಷದ ಕಾನೂನು ಘಟಕದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ, ಅವರನ್ನು ಉಚ್ಚಾಟನೆಗೊಳಿಸಿ ಮಂಡ್ಯ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಗೌರಿಶಂಕರ್ ಆದೇಶಿಸಿದ್ದಾರೆ.