ಅಯೋಧ್ಯೆಯಲ್ಲಿ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಯನ್ನು ಪ್ರಶ್ನಿಸಿದ್ದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಮತ್ತೊಮ್ಮೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಇಂದು(ಜ.19) ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, “ಅಯೋಧ್ಯೆಯಲ್ಲಿ ರಾಮಮಂದಿರದ ಕರ್ತೃ ಮತ್ತು ನಿರ್ಮಾತೃ ನಾನೇ ಎಂದು ಪ್ರಧಾನಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದರಲ್ಲಿ ಅವರ ಕೊಡುಗೆ ಶೂನ್ಯ” ಎಂದು ಹೇಳಿದ್ದಾರೆ.
Prime Minister is laying claims to be the author and builder of the Ram Mandir temple in Ayodhya. His contribution is zero. Modi instead should concentrate on his Varanasi constituency where the Gyan Vapi Jyotirling Kashi Temple needs to be re-built.
— Subramanian Swamy (@Swamy39) January 19, 2024
ಮುಂದುವರಿದು, “ನರೇಂದ್ರ ಮೋದಿಯವರು ರಾಮಮಂದಿರದ ವಿಚಾರದ ಬದಲಿಗೆ ತಮ್ಮ ಕ್ಷೇತ್ರವಾಗಿರುವ ವಾರಣಾಸಿಯಲ್ಲಿರುವ ಜ್ಞಾನವಾಪಿ ಜ್ಯೋತಿರ್ಲಿಂಗ ಕಾಶಿ ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಲಿ. ಆ ವಿಷಯದ ಮೇಲೆ ಮೋದಿಯವರು ತಮ್ಮ ಗಮನವನ್ನು ಕೇಂದ್ರೀಕರಿಸಬೇಕು” ಎಂದು ಸಲಹೆ ನೀಡಿದ್ದಾರೆ.
ಪತ್ನಿಯನ್ನು ತೊರೆದ ಮೋದಿ ರಾಮಮಂದಿರ ಉದ್ಘಾಟನೆಗೆ ಅರ್ಹರೇ? ಎಂದು ಕೇಳಿದ್ದ ಸ್ವಾಮಿ
ಇತ್ತೀಚೆಗಷ್ಟೇ ಮಾಡಿದ್ದ ಟ್ವೀಟ್‌ವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದರು.
“ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿ, ಕಷ್ಟಗಳನ್ನು ಎದುರಿಸಿದ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ಪತ್ನಿಯನ್ನೇ ತೊರೆದ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಉದ್ಘಾಟನಾ ಪೂಜೆ ಹೇಗೆ ನೆರವೇರಿಸುತ್ತಾರೆ” ಎಂದು ಪ್ರಶ್ನಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ
“ರಾಮ ಸುಮಾರು ಒಂದೂವರೆ ದಶಕದಷ್ಟು ಕಾಲ ವನವಾಸವನ್ನು ಅನುಭವಿಸಿದ. ಅಪಹರಣಗೊಂಡ ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿದ. ಆದರೆ ಮೋದಿ ಅವರು ತಮ್ಮ ಪತ್ನಿಯನ್ನು ತ್ಯಜಿಸಿದವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಿದ್ದರೆ ಅವರು ಹೇಗೆ ಈ ಪೂಜೆ ನೆರವೇರಿಸುತ್ತಾರೆ? ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನು ಮೋದಿ ಅವರು ನೆರವೇರಿಸಲು ರಾಮನ ಭಕ್ತರು ಹೇಗೆ ಅವಕಾಶ ನೀಡುತ್ತಾರೆ” ಎಂದೂ ಸುಬ್ರಮಣಿಯನ್ ಸ್ವಾಮಿ ಕೇಳಿದ್ದರು.