ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಜಾಗೃತಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಆದರೂ, ಹಲವು ರೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ, ಶೋಷಣೆಗಳು ಮುಂದುವರಿದಿವೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 461 ದೌರ್ಜನ್ಯ ಪ್ರಕರಣಗಳಲ್ಲಿ ದೂರು (ಎಫ್‌ಐಆರ್) ದಾಖಲಾಗಿದೆ.
ಈ ಒಟ್ಟು ಪ್ರಕರಣಗಳಲ್ಲಿ 643 ಮಂದಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಪೈಕಿ 10 ಕೊಲೆ ಮತ್ತು 9 ಅತ್ಯಾಚಾರದಂತಹ ಗಂಭೀರ ಪ್ರಕರಣಗಳೂ ಇವೆ. ಬೆಂಗಳೂರು ನಗರದಲ್ಲಿ 98, ಚಿಕ್ಕಮಗಳೂರು 66, ಧಾರವಾಡ 53, ತುಮಕೂರು 43 ಪ್ರಕರಣಗಳು ನಡೆದರೆ, ವಿಜಯನಗರ, ಹಾವೇರಿ, ಕಲಬುರಗಿ, ಕೋಲಾರ, ಕೊಡಗು, ಚಿತ್ರದುರ್ಗ, ಯಾದಗಿರಿ, ಹಾಸನ, ವಿಜಯಪುರ, ಬೆಂಗಳೂರು ಗ್ರಾಮೀಣ, ಚಾಮರಾಜನಗರ ಹಾಗೂ ಬಳ್ಳಾರಿಯಲ್ಲಿ ಯಾವ ಪ್ರಕರಣವೂ ದಾಖಲಾಗಿಲ್ಲ. ಸಂತ್ರಸ್ತರಿಗೆ ಒಟ್ಟು 5.16 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ವರದಿಯಾಗಿದೆ.
“ಅತ್ಯಂತ ಪ್ರಬಲವಾದ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ಹಕ್ಕುಗಳನ್ನು ಚಲಾಯಿಸಲು ಈ ಸಮುದಾಯಗಳು ಹಿಂಜರಿಯುತ್ತವೆ. ಈ ಎಲ್ಲ ಕಾರಣಗಳಿಂದ ದೌರ್ಜನ್ಯಗಳು ನಿಯಂತ್ರಣಕ್ಕೆ ಬಂದಿಲ್ಲ” ಎನ್ನುತ್ತಾರೆ ಸಮತಾ ಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ.
ಇನ್ನು ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರ, ” ದೌರ್ಜನ್ಯದ ಸತ್ಯಾಸತ್ಯತೆ ಬಗ್ಗೆ ವರದಿ ಸಲ್ಲಿಕೆಯಾದ ನಂತರ ದೌರ್ಜನ್ಯಕ್ಕೆ ಒಳಗಾದವರಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸಲಾಗುತ್ತದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಲ್ಲ ಸಮುದಾಯದವರ ಸಭೆ ನಡೆಸಿ, ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ” ಎಂದಿದ್ದಾರೆ.