ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ಸರ್ಕಾರಿ ಅಧಿಕಾರಿಗಳ ಮೇಲಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹೇಳಿದರು.
ಶುಕ್ರವಾರ ಬೀದರ ನಗರದ ಹಬ್ಸಿಕೋಟ ಅತಿಥಿ ಗೃಹದ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹಮ್ಮಿಕೊಂಡಿದ್ದ ಸಿಟ್ಟಿಂಗ್ಸ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, “ಜನರು ತಮ್ಮ ದೂರುಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬರಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕಾಗಿ ನಮ್ಮ ಆಯೋಗ ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಜನರು ಸಮಸ್ಯೆಗಳನ್ನು ಆಲಿಸಲಾಗುತ್ತಿದೆ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಅವುಗಳಿಗೆ ಪರಿಹಾರ ನೀಡಲಾಗುತ್ತದೆ” ಎಂದರು.
“ನಮಗೆ ರಕ್ಷಿಸುವ ಸಂವಿಧಾನ ಸಾರ್ವಜನಿಕರಿಗೂ ರಕ್ಷಣೆ ನೀಡುತ್ತದೆ. ನಮಗೆ ಸರ್ಕಾರ ಸಂಬಳ ಕೊಡುತ್ತದೆ ಎಂದರೆ ಅದಕ್ಕೆ ಪ್ರತಿಯಾಗಿ ನಾವು ಕೆಲಸ ಮಾಡಬೇಕು. ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಟ್ಟುವ ಸ್ಥಳಗಳಲ್ಲಿ ಧೂಳಿನಲ್ಲಿ ಕುಳಿತಿರುತ್ತವೆ, ಅಲ್ಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳು ಇರುವುದಿಲ್ಲ. ಕಾರ್ಮಿಕ ಅಧಿಕಾರಿಗಳು ಅಂತಹ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು” ಎಂದು ತಿಳಿಸಿದರು.
“ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲವು ವಲಯಗಳಲ್ಲಿ ಕೆಲಸ ಮಾಡಬೇಕಿದೆ. ನಮಗೆ ಬಹಳಷ್ಟು ಮಾಹಿತಿಗಳು ಪತ್ರಿಕೆಯಿಂದ ತಿಳಿಯುತ್ತವೆ. ಅಂತಹ ಪ್ರಕರಣಗಳಿಗೆ ಸೊಮೊಟೊ ಪ್ರಕರಣ ದಾಖಲಿಸಿ ಕ್ರಮವಹಿಲಾಗುತ್ತದೆ. ಬಾಲ ಮಂದಿರ, ಸರ್ಕಾರದ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳನ್ನು ನೀಡದಿದ್ದರೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಟಿ.ಶ್ಯಾಂಭಟ್ ಮಾತನಾಡಿ, “ಮಾನವ ಹಕ್ಕುಗಳ ಆಯೋಗ ಜಿಲ್ಲೆಗಳಿಗೆ ಬಂದಿರುವ ಉದ್ದೇಶ ದೂರುದಾರರ ದೂರುಗಳಿಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಇರುವುದರಿಂದ ಜಿಲ್ಲೆಗಳಿಗೆ ಭೇಟಿ ನೀಡಲಾಗುತ್ತಿದೆ. ಬರುವ ದೂರುಗಳಿಗೆ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಸ್ಪಂದಿಸಿದರೆ ದೂರುಗಳ ಸಂಖ್ಯೆ ಕಡಿಮೆಯಾಗುತ್ತವೆ” ಎಂದು ಹೇಳಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ ಮಾತನಾಡಿ, “ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಲ್ಲರೂ ಗೌರವಯುತವಾಗಿ ಬಾಳಬೇಕಾದರೆ ಯಾವುದೇ ತಾರತಮ್ಯ ಮಾಡಬಾರದು. ಇವುಗಳಲ್ಲಿ ಅನ್ಯಾಯವಾದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತೆ. ಇವುಗಳ ಉಲ್ಲಂಘನೆ ತಡೆಯುವ ಜವಾಬ್ದಾರಿ ಸರಕಾರಿ ಅಧಿಕಾರಿಗಳ ಮೇಲಿದೆ” ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ, “ಜನರ ದೂರುಗಳಿಗೆ ಸ್ಪಂದಿಸಲು ರಾಜ್ಯ ಮಾನವ ಹಕ್ಕುಗಳ ಆಯೋಗ ಜಿಲ್ಲೆಗೆ ಬಂದಿದೆ. ಅವರ ಸಮಸ್ಯೆಗಳಿಗೆ ಇಲ್ಲೆ ಪರಿಹಾರ ಸಿಗುತ್ತದೆ. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಿದರೆ ಯಾವುದೇ ದೂರುಗಳು ಬರುವದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದನೆಕೊಟ್ಟು ಪರಿಹಾರ ಕೊಡುವ ಕೆಲಸ ಅಧಿಕಾರಿಗಳು ಮಾಡಬೇಕೆಂದು” ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, “ಮಾನವ ಹಕ್ಕುಗಳು ಹುಟ್ಟಿನಿಂದಲೇ ಬರುವಂತಹದ್ದು, ಈ ದೇಶದ ನಾಗರಿಕರಾಗಿ ಇನ್ನೊಬ್ಬರ ಹಕ್ಕುಗಳ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ವ್ಯವಸ್ಥೆ ವಿಫಲ ಆಗಲ್ಲ, ಆದರೆ ನಾವು ಕೆಲಸ ಮಾಡಲು ವಿಫಲರಾದಾಗ ವ್ಯವಸ್ಥೆ ವಿಫಲವಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಾವು ಮೂರು ಜನ ಅಧಿಕಾರಿಗಳು ಸೇರಿ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆಗಳನ್ನು ಬೀದರ ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ” ಎಂದರು.
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಲೋಕಸ್ಪಂದನ ಮೂಲಕ ಜನರಿಗೆ ಠಾಣೆಗಳಲ್ಲಿ ಯಾವ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಪ್ರತಿದಿನ ಮುಂಜಾನೆ ವರದಿ ಮಾಡಲಾಗುತ್ತಿದೆ. ಜನರು ಶೇ 86 ಪ್ರತಿಶತ ನಮ್ಮ ಇಲಾಖೆಯ ಸೇವೆಯ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸರಕಾರಿ ಅಧಿಕಾರಿಗಳು ಸ್ವಂತಿಕೆ ಬಗ್ಗೆ ವಿಚಾರ ಮಾಡದೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು” ಎಂದು ಹೇಳಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬೀದರ ಜಿಲ್ಲೆಯಿಂದ ದಾಖಲಾದ 55 ಪ್ರಕರಣಗಳನ್ನು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಪರಿಶೀಲನೆ ನಡೆಸಿ ಕೆಲವು ದೂರುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ
ಸಭೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ದಿನೇಶ ಸಂಪತರಾಜ, ಅರುಣ ಪೂಜಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧು ಎಚ್. ಎಸ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.