ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಮರ ಕಡಿಯಬೇಕು ಎಂದರೆ ಅದಕ್ಕೆ ಸರ್ಕಾರದ ಅನುಮತಿ ಬೇಕೆ ಬೇಕು. ಆದರೂ ಬೇಕಾಬಿಟ್ಟಿಯಾಗಿ ಮರಗಳನ್ನು ಕಡಿದು, ನಗರದವನ್ನು ಸಂಪೂರ್ಣವಾಗಿ ಕಾಂಕ್ರಿಟ್ ಮಯವಾಗಿ ಮಾಡಲಾಗಿದೆ. ಕದ್ದು ಮುಚ್ಚಿ ಮರ ಕಡಿಯುತ್ತಿದ್ದವರಿಗೆ ಬುದ್ಧಿ ಕಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸ ಯೋಜನೆಯೊಂದಿಗೆ ಮುಂದೆ ಬಂದಿದೆ. ಇದೀಗ, ನಗರದಲ್ಲಿರುವ ಮರಗಳ ಸರ್ವೇಗೆ ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯ ಎಂಟು ವಲಯದಲ್ಲಿರುವ ಎಲ್ಲ ಮರಗಳ ಸರ್ವೇಗೆ ಬಿಬಿಎಂಪಿ ಮುಂದಾಗಿದ್ದು, ಈಗಾಗಲೇ 4 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ. ಅನುಮತಿ ಇಲ್ಲದೇ ಮರ ಕಡಿಯುವುದು, ಮರಗಳಿಗೆ ಆಸಿಡ್ ಹಾಕಿ ಒಣಗುವಂತೆ ಮಾಡುವುದು ಸೇರಿದಂತೆ ಹಲವು ಕೃತ್ಯಗಳಿಗೆ ಕಡಿವಾಣ ಹಾಕಲು ಸಜ್ಜಾಗಿದೆ.
ಬೆಂಗಳೂರಿನ ಎಲ್ಲ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ 50ಕ್ಕಿಂತ ಕಡಿಮೆ ಮರಗಳಿರೋ ಖಾಸಗಿ ಜಾಗಗಳಲ್ಲಿ ಮರಗಳ ಸರ್ವೇ ಮಾಡುವುದಕ್ಕೆ ಪಾಲಿಕೆ ಚಿಂತನೆ ನಡೆಸಿದೆ. ಈಗಾಗಲೇ, ಕಬ್ಬನ್‌ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಕೆಲವೆಡೆ ಮರಗಳ ಸರ್ವೇ ಮಾಡಲಾಗಿದೆ. ಇನ್ನುಳಿದ ಬೆಂಗಳೂರಿನ ರಸ್ತೆ, ಫುಟ್‌ಪಾತ್‌ನಲ್ಲಿರುವ ಮರಗಳ ಸರ್ವೇಗೆ ಪಾಲಿಕೆ ಅರಣ್ಯ ವಿಭಾಗ ತಯಾರಿ ನಡೆಸಿದೆ.
“ಬೆಂಗಳೂರಿನಲ್ಲಿರುವ ಮರಗಳ ಸರ್ವೇ ಮಾಡಿದ ಬಳಿಕ ಆ ಮರಗಳಿಗೆ ಕ್ಯೂ ಆರ್ ಕೋಡ್ ಅಳವಡಿಸಲಾಗುವುದು. ಬಳಿಕ ಆ ಏರಿಯಾದ ಮರಗಳ ಮೇಲೆ ನಿಗಾ ಇಡಬಹುದು. ಜತೆಗೆ ಅಕ್ರಮವಾಗಿ ಮರಗಳನ್ನು ಕಡಿಯುವವರ ಮೇಲೆ ಕಡಿವಾಣ ಹಾಕಬಹುದು” ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರತಿ ಮರಕ್ಕೆ ವಿಶಿಷ್ಟವಾದ ಗುರುತಿನ ಚೀಟಿಯನ್ನು ರಚಿಸಲು ಯೋಜಿಸಿರುವ ಪಾಲಿಕೆ, ನಗರದಲ್ಲಿ ಸುಮಾರು 20.8 ಲಕ್ಷ ಮರಗಳಿವೆ ಎಂದು ಅಂದಾಜಿಸಲಾಗಿದೆ. ಯೋಜನೆಗೆ ಸುಮಾರು ₹4 ಕೋಟಿ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕಾರ್ಯಕ್ಕಾಗಿ ಬಿಬಿಎಂಪಿ ಎಂಟು ಖಾಸಗಿ ಸಂಸ್ಥೆಗಳನ್ನು ತೊಡಗಿಸಿಕೊಂಡಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಟ್ಟಡ ನಿರ್ಮಾಣ ನಕ್ಷೆಗೆ ಪ್ರಮಾಣೀಕೃತ ವಾಸ್ತುಶಿಲ್ಪಿಗಳ ಸ್ವಯಂ ದೃಢೀಕರಣ ವ್ಯವಸ್ಥೆ ಶೀಘ್ರ ಜಾರಿ: ಡಿಸಿಎಂ
ಕರ್ನಾಟಕ ಹೈಕೋರ್ಟ್ 2019ರಲ್ಲಿ ಮರ ಗಣತಿ ಮಾಡುವುದಕ್ಕೆ ಆದೇಶಿಸಿದ್ದರೂ, ಬಿಬಿಎಂಪಿಯ ಹಿಂದಿನ ಯಾವುದೇ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಇದು ಮೊದಲು ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು, ಆದರೆ ಯೋಜನೆಯು ಪ್ರಾರಂಭವಾಗಲಿಲ್ಲ.
ಮರ ಗಣತಿ ನಡೆಸುವ ಪ್ರಕ್ರಿಯೆಯನ್ನು ಎಂಟು ವಲಯಗಳಾಗಿ ವಿಂಗಡಿಸಲಾಗಿದ್ದು, ವಿಶಿಷ್ಟ ಐಡಿ, ಸುತ್ತಳತೆ, ಮರದ ಜಾತಿಯ ಹೆಸರು, ಛಾಯಾಚಿತ್ರ ಮತ್ತು ಮರದ ಸ್ಥಳದಂತಹ ವಿವರಗಳನ್ನು ಹೊಂದಿರುತ್ತದೆ.