- ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸತತ ಎರಡನೇ ದಿನ ವಿಪಕ್ಷ ನಾಯಕರ ಸಭೆ
- ಎಲ್ಲ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸಬೇಕು ಎಂದ ಶರದ್ ಪವಾರ್
ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ರಚನೆಗೆ ಪ್ರಯತ್ನಿಸಿದ್ದಾರೆ.
2024ರ ಲೋಕಸಭಾ ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಎರಡು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಸತತ ಸಭೆಗಳನ್ನು ನಡೆಸುತ್ತಿವೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಪ್ರಾದೇಶಿಕ ಪಕ್ಷಗಳನ್ನು ಭೇಟಿಯಾಗಿ ಚರ್ಚಿಸುತ್ತಿದ್ದಾರೆ, ಮೈತ್ರಿ ಒಕ್ಕೂಟ ರಚಿಸುವ ಪ್ರಯತ್ನ ನಡೆದಿದೆ.
ಬುಧವಾರ (ಏಪ್ರಿಲ್ 12) ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆಗೆ ಸಭೆ ನಡೆಸಿದ್ದರು.
ನಿತೀಶ್ ಕುಮಾರ್ ಆರಂಭಿಸಿದ ಮೈತ್ರಿ ಕೂಟದ ಸಿದ್ಧತೆಯ ಪ್ರಯತ್ನಕ್ಕೆ ಇದೀಗ ಶರದ್ ಪವರ್ ಅವರೂ ಕೈಜೋಡಿಸಿದ್ದಾರೆ. ಶರದ್ ಪವಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಸಭೆಗಳಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚೆಗಳು ನಡೆದಿವೆ.
ಈ ಕುರಿತು ಮಾತನಾಡಿದ ಶರದ್ ಪವಾರ್, “ಎಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಬೇಕು. ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಅವರೊಂದಿಗೂ ನಾವು ಮಾತನಾಡಬೇಕು” ಎಂದು ಹೇಳಿದ್ದಾರೆ.
“ನಾವು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಎಲ್ಲರನ್ನು ಕರೆದುಕೊಂಡು ಮುಂದೆ ಸಾಗುತ್ತೇವೆ” ಎಂದು ತಿಳಿಸಿದ್ದಾರೆ.
“ಶರದ್ ಪವಾರ್ ಅವರ ಭೇಟಿ ಮತ್ತು ಮಾರ್ಗದರ್ಶನ ನಮಗೆ ಖುಷಿ ನೀಡಿದೆ. ನಾನು, ರಾಹುಲ್ ಗಾಂಧಿ, ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಸೇರಿ ದೇಶದ ವಿಪಕ್ಷಗಳನ್ನು ಒಗ್ಗೂಡಿಸುವ ಮಾತನಾಡಿದ್ದೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ನಮ್ಮ ಜನರಿಗೆ ಉತ್ತಮ, ಉಜ್ವಲ ಮತ್ತು ಸಮಾನ ಭವಿಷ್ಯಕ್ಕಾಗಿ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಶರದ್ ಪವಾರ್ ಜೊತೆಗಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ದೇಶ ಉಳಿಸಲು, ಪ್ರಜಾಪ್ರಭುತ್ವ ಉಳಿಸಲು, ವಾಕ್ ಸ್ವಾತಂತ್ರ್ಯ ರಕ್ಷಿಸಲು, ಸರ್ಕಾರಿ ಸಂಸ್ಥೆಗಳ ದುರುಪಯೋಗ ತಡೆಯಲು, ಯುವಕರಿಗೆ ಉದ್ಯೋಗ ಒದಗಿಸಲು ಹಾಗೂ ಹಣದುಬ್ಬರ ನಿಯಂತ್ರಿಸಲು ನಾವು ಒಂದಾಗಿ ಹೋರಾಡಲು ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಒಂದು ದಿನದ ನಂತರ ಶರದ್ ಪವಾರ್ ಜೊತೆಗಿನ ಸಭೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಮುಸ್ಲಿಂ ಮೀಸಲಾತಿ ರದ್ದು ತೀರ್ಮಾನ ತೀರ ಕಳಪೆ, ದೋಷಪೂರಿತ ನಿರ್ಧಾರ ಎಂದ ಸುಪ್ರೀಂ ಕೋರ್ಟ್
ನಿತೀಶ್ ಕುಮಾರ್ ಅವರು ಗುರುವಾರ ಎಡ ನಾಯಕರಾದ ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಅವರನ್ನು ಭೇಟಿಯಾಗುವುದರೊಂದಿಗೆ ಪ್ರತಿಪಕ್ಷಗಳ ಏಕತೆಯನ್ನು ಭದ್ರಪಡಿಸುವ ಪ್ರಯತ್ನಗಳ ವೇಗ ಹೆಚ್ಚಿಸಿದ್ದಾರೆ. ನಿತೀಶ್ ಕುಮಾರ್ ಅವರು ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನೂ ಭೇಟಿಯಾಗಿದ್ದರು.
“ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳು ವೇಗ ಪಡೆದುಕೊಂಡಿವೆ. ಪ್ರತಿಪಕ್ಷಗಳ ಒಕ್ಕೂಟ ರಚಿಸಲಾಗುವುದು ಮತ್ತು ರಾಜ್ಯಮಟ್ಟದಲ್ಲಿ ಸ್ಥಾನ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ಅದು ಸಾಕಾರಗೊಂಡರೆ ಚುನಾವಣೆ ನಂತರವೇ ತೃತೀಯ ರಂಗ ಬರಲಿದೆ” ಎಂದು ಸೀತಾರಾಮ್ ಯೆಚೂರಿ ಹೇಳಿದ್ದಾರೆ.
ಬಿಜೆಪಿಯೇತರ ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳೂ ಇವೆ. ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಭಾರತ್ ರಾಷ್ಟ್ರ ಸಮಿತಿ ಕಾಂಗ್ರೆಸ್‌ಯೇತರ ಮೈತ್ರಿಗೆ ಯೋಜಿಸುತ್ತಿವೆ.
ಕಾಂಗ್ರೆಸ್‌ನೊಂದಿಗೆ ಮೈಮನಸ್ಸು ಹೊಂದಿರುವ ಪಕ್ಷಗಳ ನಾಯಕರ ಜೊತೆಗೆ ಮಾತುಕತೆ ನಡೆಸಲಾಗುತ್ತದೆ. ಆ ಮೂಲಕ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ.
ಡಿಎಂಕೆ, ಎನ್‌ಸಿಪಿ, ಎಡ ಪಕ್ಷಗಳು ಹಾಗೂ ಆರ್‌ಜೆಡಿ ಮೊದಲಾದ ಪಕ್ಷಗಳು ಕಾಂಗ್ರೆಸ್ ಇಲ್ಲದೆ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ ಎಂದು ನಂಬಿವೆ.