ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಜಾರಿ ನಿರ್ದೇಶನಾಲಯ (ಇಡಿ) ಹೊಸ ಸಮನ್ಸ್ ಜಾರಿ ಮಾಡಿದೆ. ಉದ್ಯೋಗಕ್ಕಾಗಿ ಜಮೀನು ಹಗರಣದ ತನಿಖೆಗೆ ಸಂಬಂಧಿಸಿದಂತೆ ಪಾಟ್ನಾದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಲಾಲು ರೈಲ್ವೇ ಸಚಿವರಾಗಿದ್ದಾಗ ತಮ್ಮ ಕುಟುಂಬಕ್ಕೆ ಮತ್ತು ತಮ್ಮ ಸಹಚರರಿಗೆ ಕಡಿಮೆ ದರದಲ್ಲಿ ಭೂಮಿಯನ್ನು ಉಡುಗೊರೆಯಾಗಿ ನೀಡಿದವರಿಗೆ ಅಥವಾ ಮಾರಾಟ ಮಾಡಿದವರಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಲಾಗಿದೆ ಎಂಬ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿತ್ತು. ಇದೀಗ, ಪ್ರಕರಣವನ್ನು ಇಡಿ ಕೈಗೆತ್ತಿಕೊಂಡಿದೆ.
“ಪಾಟ್ನಾದ ಬ್ಯಾಂಕ್ ರಸ್ತೆಯಲ್ಲಿರುವ ಇಡಿ ಕಚೇರಿಯಲ್ಲಿ ಜನವರಿ 29 ರಂದು ಲಾಲು ಅವರು ಹಾಜರಾಗಬೇಕು ಮತ್ತು ತೇಜಸ್ವಿ ಅವರು ಜನವರಿ 30ರಂದು ಹಾಜರಾಗಬೇಕು” ಎಂದು ಇಡಿ ಹೇಳಿರುವುದಾಗಿ ವರದಿಯಾಗಿದೆ.
ಈ ಹಿಂದೆ, ಇದೇ ಪ್ರಕರಣದಲ್ಲಿ ಇಬ್ಬರನ್ನೂ ದೆಹಲಿಯಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ, ಇಬ್ಬರೂ ಹಾಜರಾಗಿರಲಿಲ್ಲ. ಕಳೆದ ವರ್ಷ ಒಮ್ಮೆ ಏಜೆನ್ಸಿಯ ಮುಂದೆ ಹಾಜರಾಗಿದ್ದರು.
2023ರ ನವೆಂಬರ್‌ನಲ್ಲಿ ಲಾಲು ಅವರ ಆಪ್ತ ಅಮಿತ್ ಕತ್ಯಾಲ್ ಅವರನ್ನು ಇಡಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ. ಈ ಬೆನ್ನಲ್ಲೇ, ಇದೀಗ, ತಂದೆ-ಮಗನನ್ನು ವಿಚಾರಣೆಗೆ ಹಾಜರಾಗುವಂತೆ ಕರೆದಿದೆ.
ಇಡಿ ಅಧಿಕಾರಿಗಳ ಪ್ರಕಾರ, ರೈಲ್ವೇ ಉದ್ಯೋಗ ಪಡೆದ ಅಭ್ಯರ್ಥಿಗಳಿಂದ ಲಾಲು ಅವರ ಪತ್ನಿ ರಾಬ್ರಿ ದೇವಿ ಮತ್ತು ಮಗಳು ಹೇಮಾ ಯಾದವ್ ಪ್ರತ್ಯೇಕವಾಗಿ ತಲಾ ಎರಡು ಕಡೆಗಳಲ್ಲಿ ಭೂಮಿಯನ್ನು ಪಡೆದಿದ್ದಾರೆ. ಈ ಭೂಮಿಯನ್ನು ಕೇವಲ 7.5 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ. ನಂತರ, ಅಬು ಡೋಜಾನಾ ನಡೆಸುತ್ತಿರುವ ಮೆರಿಡಿಯನ್ ಕನ್ಸ್ಟ್ರಕ್ಷನ್ಸ್ ಇಂಡಿಯಾ ಲಿಮಿಟೆಡ್ ಕಂಪನಿಗೆ 3.5 ಕೋಟಿಗೆ ಮಾರಾಟ ಮಾಡಲಾಗಿದೆ.