ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಇರುವುದನ್ನು ವಿರೋಧಿಸಿ ಜನವರಿ 26ರಂದು ಸಂಯುಕ್ತ ಹೋರಾಟ ಕರ್ನಾಟಕ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗುತ್ತದೆ ಎಂದು ಹೋರಾಟ ಸಮಿತಿ ಸಂಚಾಲಕ ಚಾಮರಸ ಮಾಲಿ ಪಾಟೀಲ್ ಹೇಳಿದರು.
ರಾಯಚೂರಿನಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರೂಪಿಸಲು ಸಮಿತಿ ರಚಿಸಬೇಕು. ವಿದ್ಯುತ್ ತಿದ್ದುಪಡಿ ಕಾಯ್ದೆ, ಲಿಖೀಂಪುರ ಪ್ರಕರಣ ಸೇರಿದಂತೆ ರೈತರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕು. ಕಾರ್ಮಿಕ ಕಾಯ್ದೆ ಸೇರಿದಂತೆ ಭರವಸೆ ನೀಡಿದ್ದ ಕೇಂದ್ರ ಯಾವುದೇ ಕ್ರಮಕ್ಕೂ ಮುಂದಾಗದೇ ಇರುವುದನ್ನು ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಟ್ರ್ಯಾಕ್ಟರ್‌ಗಳೊಂದಿಗೆ ರ‍್ಯಾಲಿ ನಡೆಸಲಾಗುತ್ತದೆ” ಎಂದು ಹೇಳಿದರು.
“ರಾಜ್ಯ ಸರ್ಕಾರ ಮೂರು ಕಾಯ್ದೆಗಳನ್ನು ಹಿಂಪಡೆಯುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜನವರಿ 18ರಂದು ಸಭೆ ನಡೆಸಿ ಭರವಸೆ ನೀಡಿದ್ದಾರೆ. ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇದ ಕಾಯ್ದೆ, ಕಾರ್ಮಿಕರಿಗೆ 12 ತಾಸು ಬದಲು 8 ತಾಸು ನಿಗದಿಪಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ” ಎಂದು ಹೇಳಿದರು.
“ರಾಜ್ಯದಲ್ಲಿ ಬರಗಾಲ ಘೋಷಣೆಯಾದರೂ ಬಲವಂತದಿಂದ ಸಾಲ ವಸೂಲಿ ನಡೆಸಲಾಗುತ್ತಿದ್ದು, ಇದನ್ನು ಕೂಡಲೇ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಆದೇಶ ಹೊರಡಿಸುವುದಾಗಿಯೂ ಭರವಸೆ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕೇಂದ್ರದ ಮೇಲೆ ಒತ್ತಡ ಹಾಕಬೇಕಿರುವ ಬಿಜೆಪಿ ನಾಯಕರು ಹೋರಾಟ ನಡೆಸುತ್ತಿಲ್ಲ. ಬರ ಪರಿಹಾರ ಅನುದಾನ ನೀಡದೇ ಇರುವ ಕೇಂದ್ರ ಸರ್ಕಾರವನ್ನು ಪ್ರಶ್ನಿಸದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ದ ಯಾವ್ಯಾವುದಕ್ಕೋ ಹೋರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರ ಕಳೆದ 9 ವರ್ಷದಲ್ಲಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆದರೆ ಖರ್ಚು ದ್ವಿಗುಣಗೊಂಡಿದೆಯೇ ಹೊತರು ರೈತ ಆದಾಯ ಕುಸಿಯುತ್ತಲೇ ಇದೆ. ನಿರುದ್ಯೋಗ ಪ್ರಮಾಣ ಏರಿಕೆಯಾಗುತ್ತಿದೆ. ಸರ್ಕಾರ ವೈಫಲ್ಯ ಮುಚ್ಚಿಕೊಳ್ಳಲು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಮಾಧ್ಯಮಗಳನ್ನು ಬಳಸಿಕೊಂಡು ಅಯೋಧ್ಯೆ ಮಂದಿರ ರಾಜಕೀಯ ಪ್ರಾರಂಭಿಸಿದೆ. ದೊಡ್ಡ ಕಂಪನಿಗಳ ಸಾಲವನ್ನು ರೈಟ್ ಆಫ್ ಮಾಡಿ ₹14 ಲಕ್ಷ ಕೋಟಿ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮಾತ್ರ ಮುಂದಾಗುತ್ತಿಲ್ಲ. ಇದನ್ನು ಕೇಂದ್ರಕ್ಕೆ ಮತ್ತೊಮ್ಮೆ ರೈತರ ಹೋರಾಟ ನೆನಪು ಮಾಡಿಕೊಡಲಾಗುತ್ತದೆ” ಎಂದರು.
ಜಿಲ್ಲಾ ಸಂಚಾಲಕ ಕೆ ಜಿ ವೀರೇಶ ಮಾತನಾಡಿ, “ಜನವರಿ 26ರಂದು ನಗರದಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ರ‍್ಯಾಲಿ ನಗರದ ರಾಜೇಂದ್ರ ಗಂಜ್‌ನಿಂದ ಪ್ರಾರಂಭವಾಗಿ ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತ, ತೀನ್ ಕಂದೀಲ್, ತಹಶೀಲ್ದಾರ್ ಕಚೇರಿ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುತ್ತದೆ” ಎಂದರು.
ರಾಘವೇಂದ್ರ ಕುಷ್ಟಗಿ ಮಾತನಾಡಿ, “ಕೇಂದ್ರ ಸರ್ಕಾರ ವಚನಭ್ರಷ್ಟ ಸರ್ಕಾರವಾಗಿದೆ. ರೈತರ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಮರೆತುಬಿಟ್ಟಿದೆ. ಇದು ಕೇವಲ ರೈತರ ಸಮಸ್ಯೆಯಲ್ಲ, ಅನ್ನ ಉಣ್ಣುವ ಎಲ್ಲರೂ ಸೇರಿ ಹೋರಾಟಕ್ಕೆ ಬೆಂಬಲಿಸಬೇಕಿದೆ. ರೈತರ ಹೋರಾಟಕ್ಕೆ ಬೆಂಬಲಿಸಿ ಅನ್ನದ ಋಣ ತೀರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಧಾನಿ ಮೋದಿ ಡೋಂಗಿ ಪ್ರಚಾರ ಮಾಡುತ್ತಿದ್ದಾರೆ: ಸಿಪಿಐ
“ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡಿದಲ್ಲಿ, ಆಗಲೂ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿ ಎಸ್ ಶರಣಬಸವ, ಮುದುಕಪ್ಪ ನಾಯಕ, ಮಲ್ಲನಗೌಡ, ರವಿಕುಮಾರ, ಆಂಜಿನಯ್ಯ ಕುರುಬದೊಡ್ಡಿ, ಸಾಜಿದ್ ಹುಸೇನ್ ಇದ್ದರು.
ವರದಿ : ಹಫೀಜುಲ್ಲ