- ‘ಪ್ರಧಾನಿ ಮೋದಿ ₹1500 ಕೋಟಿ ಲೂಟಿ ಬಗ್ಗೆ ಮಾತನಾಡಲಿ’
- 40% ಕಮಿಷನ್ ಸರ್ಕಾರಕ್ಕೆ ತೀವ್ರ ಹಿನ್ನೆಡೆ ಎಂದ ಪ್ರಿಯಾಂಕ್
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ರಾಜಕೀಯ ರಣಕಣ ರಂಗೇರಿದೆ. ಸದಾ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಯನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಲು ಕುಟುಂಬ ರಾಜಕಾರಣ ನಡೆಸಿದ್ದಾರೆ ಎಂದು ಹೇಳುತ್ತಿತ್ತು. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಉಲ್ಲೇಖಿಸಿ, “ದ್ವಂದ್ವ ಮತ್ತು ಸುಳ್ಳು ಬಿಜೆಪಿಯ ಸಹಜ ಸ್ವಭಾವ” ಎಂದು ವ್ಯಂಗ್ಯವಾಡಿದ್ದಾರೆ.
“ಕುಟುಂಬ ರಾಜಕಾರಣಕ್ಕೆ ಕೊನೆ ಹಾಡಿದ್ದೇವೆ ಎಂದು ಕೊಚ್ಚಿಕೊಳ್ಳುವ ಬಿಜೆಪಿ, ತನ್ನ ಪಟ್ಟಿಯಲ್ಲಿನ 212 ಅಭ್ಯರ್ಥಿಗಳ ಪೈಕಿ ಸುಮಾರು 40 ಮಂದಿ ರಾಜಕಾರಣಿಗಳ ಮನೆಯವರಿಗೇ ಟಿಕೆಟ್ ನೀಡಿದೆ” ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಹಾವೇರಿ ಮೀಸಲು ಕ್ಷೇತ್ರದಿಂದ ಟಿಕೆಟ್ ಕಳೆದುಕೊಂಡಿರುವ ಬಿಜೆಪಿ ಹಾಲಿ ಶಾಸಕ ನೆಹರೂ ಓಲೇಕಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ 1,500 ಕೋಟಿ ರೂ ಲೂಟಿ ಮಾಡಿರುವ ಆರೋಪ ಹೊರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಪ್ರಿಯಾಂಕ್ ಖರ್ಗೆ, “40% ಕಮಿಷನ್ ಏಜೆಂಟ್ ಬೊಮ್ಮಾಯಿ ಅವರಿಂದ ಬಿಜೆಪಿಗೆ ಹಿನ್ನಡೆಯಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಸ್ವಪಕ್ಷದ ವಿರುದ್ಧ ನೆಹರೂ ಓಲೇಕಾರ್ ತಮ್ಮ ಕ್ಷೇತ್ರದಲ್ಲಿ ತುಂತುರು ನೀರಾವರಿ ಯೋಜನೆಯಲ್ಲಿ ₹1500 ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದಯವಿಟ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸಿ, ಮುಂದಿನ ಬಾರಿ ಅವರು ರಾಜ್ಯಕ್ಕೆ ಬಂದಾಗ ಇದರ ಬಗ್ಗೆ ಮಾತನಾಡಲು” ಎಂದು ಟೀಕಿಸಿದ್ದಾರೆ.