ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದರಲ್ಲಿ ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದು ಸುಸ್ತಿಯಾಗಿರುವ ಸಾಲಗಳ ಡಿ.31ರವರೆಗಿನ ಕಂತುಗಳನ್ನು ಫೆ.29ರ ಒಳಗಾಗಿ ಪಾವತಿಸಿದರೆ ಅಂತಹವರ ಬಡ್ಡಿಯನ್ನು (ಮರುಪಾವತಿ ದಿನಾಂಕದವರೆಗೆ) ಸಂಪೂರ್ಣ ಮನ್ನಾ ಮಾಡಲಾಗುವುದು. ಈ ಬಡ್ಡಿಯನ್ನು ಸಹಕಾರ ಸಂಘಗಳಿಗೆ ಸರ್ಕಾರದಿಂದ ಭರ್ತಿ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
ಇದರಿಂದ 56,879 ಮಂದಿ ರೈತರ 44,020, 50 ಕೋಟಿ ರು. ಬಡ್ಡಿ ಮನ್ನಾ ಆಗಲಿದೆ. 2024ರ ಫೆ.20ರ ಒಳಗೆ ಸಂಬಂಧಪಟ್ಟ ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಿಗೆ ಸಂಪೂರ್ಣ ಸಾಲ ಬಾಕಿಯನ್ನು ಪಾವತಿಸಿದರೆ ಮಾತ್ರ ಮನ್ನಾ ಲಾಭ ಸಿಗಲಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ. ರಾಜ್ಯ ಸರ್ಕಾರದ ಆದೇಶ ಆಧರಿಸಿ ಶನಿವಾರ ಎಲ್ಲಾ ಸಹಕಾರ ಬ್ಯಾಂಕ್‌ಗಳಿಗೂ ಸಹಕಾರ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?
ಸುಸ್ತಿ ಸಾಲಗಾರರಾಗಿರುವ ರೈತರಿಗೆ 5 ದಿನಗಳೊಳಗಾಗಿ ತಿಳಿವಳಿಕೆ ಪತ್ರ ಕಳುಹಿಸಬೇಕು. ಸಾಲ ವಸೂಲಾತಿಗೆ ನಿಗದಿಪಡಿಸಿರುವ ಫೆ.20 ದಿನಾಂಕದಿಂದ 45 ದಿನಗಳೊಳಗಾಗಿ (ಏ.15ರ ಒಳಗಾಗಿ) ಬಡ್ಡಿ ಮನ್ನಾ ಬಗೆಗಿನ ಬಿಲ್ಲುಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್, ಪಿಕಾರ್ಡ್, ಬ್ಯಾಂಕ್, ಡಿಸಿಸಿ ಬ್ಯಾಂಕ್ ಶಾಖೆಗಳು ಸಹಕಾರ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಈ ಬಡ್ಡಿ ಮನ್ನಾ ಯೋಜನೆಗೆ ತಗಲುವ ವೆಚ್ಚವನ್ನು ಸಹಕಾರ ಇಲಾಖೆಗೆ ಬಜೆಟ್‌ನಲ್ಲಿ ಒದಗಿಸಿರುವ ಸಾಮಾನ್ಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ (ಎಸ್ಸಿಪಿ-ಟಿಎಸ್‌ಪಿ) ಹಣದ ಮೂಲಕ ಭರಿಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಬೆಳೆ ಸಾಲಕ್ಕೆ ಅನ್ವಯವಿಲ್ಲ ಬಡ್ಡಿ ಮನ್ನಾವು ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸುಸ್ತಿ ಸಾಲಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಳೆ ಸಾಲವು ಅಲ್ಪಾವಧಿ ಸಾಲವಾಗಿದ್ದು, ಶೂನ್ಯ ಬಡ್ಡಿದರದಲ್ಲಿ ಬ್ಯಾಂಕ್‌ಗಳು ನೀಡುತ್ತವೆ. ಹೀಗಾಗಿ ಅದಕ್ಕೆ ಬಡ್ಡಿ ಮನ್ನಾ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯಮಾವಧಿ ಸಾಲವನ್ನು 12 ತಿಂಗಳಿಂದ 36 ತಿಂಗಳಿಗೆ ಹಾಗೂ ದೀರ್ಘಾವಧಿ ಸಾಲವನ್ನು 10 ವರ್ಷದ ಅವಧಿವರೆಗೆ ನೀಡಲಾಗುತ್ತದೆ.