ದಲಿತನ ಜಮೀನಲ್ಲಿ ಸಿಕ್ಕ ಕಲ್ಲಿನಿಂದ ಅಯೋಧ್ಯೆ ರಾಮನ ವಿಗ್ರಹ; ಇದನ್ನೂ ತಿರಸ್ಕರಿಸುತ್ತಾರಾ ಸವರ್ಣೀಯರು?

Date:

Advertisements

ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆ ಅಶುದ್ಧವೆಂದು ವಾಪಸ್ ಕೊಟ್ಟ ಸವರ್ಣಿಯರು ಈಗ ಬಾಲರಾಮನ ಮೂರ್ತಿಯನ್ನೇ ಬೇಡ ಅನ್ನುತ್ತಾರಾ? ಅಂದಹಾಗೆ ಈ ವರದಿ ಪ್ರಕಟಿಸಿದ ’ಮೂಕನಾಯಕ’ ಸಂಪಾದಕಿ ಮೀನಾ ಕೊತ್ವಾಲ್‌ ಬಗ್ಗೆ ನಮಗೆಷ್ಟು ಗೊತ್ತು?

ರಾಮಮಂದಿರ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಕರಾಳ ಸುದ್ದಿ ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನದಿಂದ ಬಂದಿದೆ. ಪ್ರಖ್ಯಾತ ಜಾಲತಾಣ ’ಮೂಕನಾಯಕ’ ಮಾಡಿರುವ ವರದಿ ಹಲವು ಚರ್ಚೆಗೆ ಗ್ರಾಸವಾಗಿದೆ.

“ಸವರ್ಣಿಯ ಭಾರತದಲ್ಲಿ ದಲಿತರ ಸ್ಥಾನ ಯಾವುದೆಂದು ಅರ್ಥವಾಯಿತಾ? ರಾಮಜಪ ಬಿಟ್ಟು ಭೀಮಮಾರ್ಗ ಹಿಡಿಯಿರಿ” ಎಂಬ ಅಭಿಪ್ರಾಯವನ್ನು ಜಾಗೃತ ದಲಿತರು ವ್ಯಕ್ತಪಡಿಸುತ್ತಿದ್ದಾರೆ.

Advertisements

ರಾಮಮಂದಿರದ ಉತ್ಸವಕ್ಕಾಗಿ ದಲಿತರು ಕೊಟ್ಟ ಹಣ ಅಶುದ್ಧವೆಂದು ಪ್ರಬಲ ಜಾತಿಗಳು ತಿರಸ್ಕರಿಸಿರುವುದಕ್ಕೆ ರಾಜಸ್ಥಾನದ ಝಲಾವರ್ ಜಿಲ್ಲೆಯ ಮುಂಡ್ಲಾ ಗ್ರಾಮ ಸಾಕ್ಷಿಯಾಗಿದೆ.

“ದಲಿತರಿಂದ ಬಂದ ಹಣವನ್ನು ದೇವಾಲಯದ ಆಚರಣೆಗಳಿಗೆ ಸ್ವೀಕರಿಸುವುದಿಲ್ಲ. ಅವರ ದೇಣಿಗೆಯಿಂದ ಮಾಡಿದ ಪ್ರಸಾದವನ್ನು ‘ಅಶುದ್ಧ’ವೆಂದು ಪರಿಗಣಿಸಲಾಗುವುದು” ಎಂದು ಪ್ರಬಲ ಜಾತಿಯವರು ಹೇಳಿದ್ದಾರೆ. ಇದು ಪಕ್ಷಪಾತ ಮತ್ತು ತಾರತಮ್ಯ ಎಂದು ಆರೋಪಿಸಿ ದಲಿತರು ಜನವರಿ 11ರಂದು ಝಲಾವರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಈ ಸಂಗತಿ ಬಯಲಾದ ಬೆನ್ನಲ್ಲೇ ಮತ್ತೊಂದು ಚರ್ಚೆ ಮುನ್ನೆಲೆಗೆ ಬಂದಿದೆ.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ಬಾಲರಾಮನ ಮೂರ್ತಿ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುವುದು ಸ್ಪಷ್ಟವಾಗಿದೆ. ಆದರೆ ಈ ರಾಮನ ವಿಗ್ರಹಕ್ಕೆ ಬಳಸಿರುವುದು ದಲಿತ ವ್ಯಕ್ತಿಯೊಬ್ಬರ ಜಮೀನಿನ ಕ್ವಾರೆಯಿಂದ ತೆಗೆದ ಶಿಲೆಯದ್ದಾಗಿದೆ. ಹಾಗಾದರೆ ರಾಮನ ವಿಗ್ರಹವನ್ನು ಈ ಜಾತಿವಾದಿಗಳು ತಿರಸ್ಕರಿಸುತ್ತಾರಾ ಎಂದು ಪ್ರಶ್ನಿಸಲಾಗುತ್ತಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ವ್ಯಕ್ತಿ ರಾಮದಾಸ್ ಅವರ ಜಮೀನನಲ್ಲಿ ದೊರೆತ ಶಿಲೆಯನ್ನು ರಾಮನ ವಿಗ್ರಹವಾಗಿ ಕೆತ್ತಿರುವ ಸಂಬಂಧ ಶಾಸಕ ಜಿ.ಟಿ.ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ್ದರು.

“ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ‘ಬಾಲರಾಮ’ನ ಮೂರ್ತಿಯನ್ನು ಕೆತ್ತಿರುವ ಕೃಷ್ಣಶಿಲೆಯು ಸಿಕ್ಕ ಜಾಗವಾದ ತಾಲ್ಲೂಕಿನ ಜಯಪುರ ಹೋಬಳಿಯ ಹಾರೋಹಳ್ಳಿಯ ದಲಿತ ಮುಖಂಡ ರಾಮದಾಸ್ ಅವರ ಹೊಲದಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ” ಎಂದು ಅವರು ತಿಳಿಸಿದ್ದರು.

‘ಪ್ರಜಾವಾಣಿ’ ಮಾಡಿರುವ ವರದಿಯ ಪ್ರಕಾರ, “ಹಾರೋಹಳ್ಳಿ ಹಾಗೂ ಗುಜ್ಜೇಗೌಡನಪುರ ಗ್ರಾಮಸ್ಥರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಅಯೋಧ್ಯೆಯಲ್ಲಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ದಿನವಾದ ಜ.22ರಂದು ಇಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 6ರಿಂದಲೇ ಭಜನೆ ಮೊದಲಾದ ಕಾರ್ಯಕ್ರಮ ನಡೆಯಲಿದೆ. ಶ್ರೀರಾಮ ಭಕ್ತರು ಪಾಲ್ಗೊಳ್ಳಬಹುದು” ಎಂದಿದ್ದಾರೆ.

“ಶಿಲೆಯು ಆ ಗ್ರಾಮದ ಸ.ನಂ. 196, 197ಕ್ಕೆ ಸೇರಿದ ಜಾಗದಲ್ಲಿ ಸಿಕ್ಕಿದ್ದಾಗಿದೆ. ರಾಮದಾಸ್ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಸೇರಿದ ಜಮೀನು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನಮ್ಮೂರಿನ ಶಿಲೆಯು ಮೂರ್ತಿಯಾಗಿ ವಿಶ್ವಮಾನ್ಯತೆ ಪಡೆದಿರುವುದು ಹೆಮ್ಮೆ ತಂದಿದೆ. ಶಿಲೆ ದೊರೆತ ಜಾಗವು ಈಗ ಪುಣ್ಯಕ್ಷೇತ್ರವಾಗಿದೆ. ಆದ್ದರಿಂದ ಜನರಿಂದಲೇ ದೇಣಿಗೆ ಸಂಗ್ರಹಿಸಿ ಶ್ರೀರಾಮಮಂದಿರ ಕಟ್ಟಿಸಲಾಗುವುದು. ಪ್ರತಿಷ್ಠಾಪನೆಗೆ ಆಯ್ಕೆಯಾದ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಜ.27ರ ನಂತರ ಮೈಸೂರಿಗೆ ವಾಪಸಾಗಲಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸನ್ಮಾನಿಸಿ, ಹಾರೋಹಳ್ಳಿ ಶ್ರೀರಾಮಮಂದಿರಕ್ಕೂ ಮೂರ್ತಿ ಕೆತ್ತಿ ಕೊಡುವಂತೆ ಕೋರಲಿದ್ದೇವೆ” ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.

ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಶಿಲೆಯೇ ಈಗ ವಿಗ್ರಹವಾಗಿ ರೂಪುಗೊಂಡಿರುವ ಕುರಿತು ಕನ್ನಡದ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ. ಈ ಜಾಗದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಈಗಾಗಲೇ ಶುರುವಾಗಿವೆ. ರಾಮದಾಸ್ ಅವರೂ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ದಲಿತರು ಕೊಟ್ಟ ಕಾಸನ್ನು ತಿರಸ್ಕರಿಸಿದ ಬೆಳವಣಿಗೆಗಳು ಆಗಿರುವಾಗ, ದಲಿತರ ಭೂಮಿಯಲ್ಲೇ ಸಿಕ್ಕ ಕಲ್ಲು ಈಗ ವಿಗ್ರಹವಾಗಿರುವುದು ’ಅಶುದ್ಧ’ ಆಗುತ್ತದೆಯೇ?

’ಮೂಕನಾಯಕ’ ವರದಿ ಸುಳ್ಳೆ?

’ಮೂಕನಾಯಕ’ ಜಾಲತಾಣವು ವರದಿ ಮಾಡಿದ ಬಳಿಕ ಅದನ್ನು ಆಧರಿಸಿ ಕೆಲವು ಜಾಲತಾಣಗಳು ಸುದ್ದಿಯನ್ನು ಪ್ರಕಟಿಸಿವೆ. ಅಂತೆಯೇ ’ಈದಿನ.ಕಾಂ’ ಕೂಡ ವರದಿ ಮಾಡಿತು. ಈ ಸುದ್ದಿಗೆ ಸಂಬಂಧಿಸಿದಂತೆ ’ಈದಿನ.ಕಾಂ’ನ ಶೀರ್ಷಿಕೆ ಮತ್ತು ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಅಪಪ್ರಚಾರ ಮಾಡುವ ಪ್ರಯತ್ನಗಳನ್ನೂ ಅನೇಕರು ಮಾಡಿದ್ದಾರೆ. ಹೀಗೆ ವಾದಿಸುವವರಿಗೆ ’ಮೂಕನಾಯಕ’ ಜಾಲತಾಣದ ಮಹತ್ವವಾಗಲೀ ಅದರ ಸಂಪಾದಕರಾಗಿರುವ ಮೀನಾ ಕೊತ್ವಾಲ್ ಅವರ ಬಗ್ಗೆಯಾಗಲೀ ಮಾಹಿತಿಯ ಕೊರತೆ ಇದ್ದಂತೆ ಕಾಣುತ್ತಿದೆ.

ಜಿಲ್ಲಾಧಿಕಾರಿಯವರಿಗೆ ನೀಡಿರುವ ದೂರಿನ ಪ್ರತಿಯನ್ನು ’ಮೂಕನಾಯಕ’ ಲಗ್ಗತ್ತಿಸಿದೆ. ಆದರೂ ಅಪಪ್ರಚಾರ ನಿಂತಿಲ್ಲ. ದಮನಿತ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯಗಳ ಕುರಿತು, ಮುಖ್ಯವಾಹಿನಿಗಳಲ್ಲಿ ಕಡೆಗಣನೆಗೆ ಒಳಗಾಗುವ ಸುದ್ದಿಗಳನ್ನು ನಿರಂತರ ಪ್ರಕಟ ಮಾಡುವ ಪ್ರಮುಖ ಜಾಲತಾಣವಾಗಿ ’ಮೂಕನಾಯಕ’ ಗುರುತಿಸಿಕೊಂಡಿದೆ.

ದೂರು 2
ಜಿಲ್ಲಾಧಿಕಾರಿಗೆ ನೀಡಿರುವ ದೂರು

ಮುಖ್ಯವಾಹಿನಿ ಮಾಧ್ಯಮಗಳಲ್ಲಿನ ಜಾತಿ ತಾರತಮ್ಯವನ್ನು ಅನುಭವಿಸಿದವರು ಮೀನಾ ಕೊತ್ವಾಲ್. ದಲಿತ ಸಮುದಾಯದವರಾದ ಅವರು ಹಿಂದೊಮ್ಮೆ ‘ನ್ಯೂಯಾರ್ಕ್ ಟೈಮ್ಸ್‌’ ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಬಿಬಿಸಿ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಾವು ಅನುಭವಿಸಿದ ಜಾತಿ ನೋವುಗಳನ್ನು ಮೀನಾ ಬಿಚ್ಚಿಟ್ಟಿದ್ದರು.

2017ರ ಸಂದರ್ಭದಲ್ಲಿ ಮೀನಾ ಅವರು ಬಿಬಿಸಿಯ ಹಿಂದಿ ಅವತರಣಿಕೆಯಲ್ಲಿ ಕೆಲಸ ಮಾಡುತ್ತಿದ್ದರು. “ಸಹಿಗಳಿಗೆಯು ಹೆಚ್ಚು ಕಾಲ ಉಳಿಯಲಿಲ್ಲ. ಬಿಬಿಸಿಯಲ್ಲಿದ್ದ ಪ್ರಬಲ-ಜಾತಿ ಸಹೋದ್ಯೋಗಿ ನನ್ನ ಜಾತಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸುತ್ತಿದ್ದನು. ನಂತರ ಸಹೋದ್ಯೋಗಿಗಳ ಗುಂಪಿನಿಂದ ಹೊರಹಾಕಲಾಯಿತು” ಎಂದು ಮೀನಾ ‘ನ್ಯೂಯಾರ್ಕ್ ಟೈಮ್ಸ್’ಗೆ ತಿಳಿಸಿದ್ದರು.

meena kotwal
ದಲಿತ ಪತ್ರಕರ್ತೆ ಮೀನಾ ಕೊತ್ವಾಲ್

“ನಾನು ನೀಡಿದ ದೂರುಗಳನ್ನು ತನ್ನ ಮೇಲಧಿಕಾರಿಗಳು ಕಡೆಗಣಿಸಿದರು” ಎಂದು ಮೀನಾ ಬಹಿರಂಗಪಡಿಸಿದ್ದರು. “ಎರಡು ವರ್ಷಗಳ ನಂತರ ಲಂಡನ್‌ನಲ್ಲಿನ ಬಿಬಿಸಿ ಅಧಿಕಾರಿಗಳಿಗೆ ಅಧಿಕೃತ ದೂರನ್ನು ಸಲ್ಲಿಸಲಾಯಿತು. ನಂತರದಲ್ಲಿ ನನ್ನೊಂದಿಗೆ ಒಪ್ಪಂದವನ್ನು ಮುಂದುವರಿಸಲಾಗಲಿಲ್ಲ. ದೂರನ್ನೂ ವಜಾಗೊಳಿಸಲಾಗಿತು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

ಈ ಘಟನೆಯ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ನ್ಯೂಯಾರ್ಕ್ ಟೈಮ್ಸ್‌ ಮಾಧ್ಯಮವು ಬಿಬಿಸಿಯನ್ನು ಸಂಪರ್ಕಿಸಿತ್ತು. ಬಿಬಿಸಿ ಪ್ರಕರಣದ ವಿವರಗಳನ್ನು ನೀಡಲು ನಿರಾಕರಿಸಿತ್ತು.

ಇದನ್ನೂ ಓದಿರಿ: ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆಯನ್ನು ‘ಅಶುದ್ಧ’ವೆಂದು ವಾಪಸ್‌ ಕೊಟ್ಟ ಸವರ್ಣೀಯರು

“ಸಿಬ್ಬಂದಿಯ ವೈಯಕ್ತಿಕ ವಿಷಯಗಳನ್ನು ಚರ್ಚಿಸುವುದಿಲ್ಲ ಮತ್ತು ಭಾರತೀಯ ಕಾನೂನನ್ನು ಸಂಪೂರ್ಣವಾಗಿ ಅನುಸಲಾಗುತ್ತಿದೆ” ಎಂದಿತ್ತು ಬಿಬಿಸಿ ಸಂಸ್ಥೆ. ಬಿಬಿಸಿಯ ಲಂಡನ್ ಮೂಲದ ವಕ್ತಾರರು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿಕೆ ನೀಡಿ, “ನಮ್ಮೊಂದಿಗೆ ಕೆಲಸ ಮಾಡುವ ಜನರು ವೈವಿಧ್ಯತೆಯಿಂದ ಕೂಡಿರಬೇಕೆಂಬ ದೃಷ್ಟಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ” ಎಂದು ಹೇಳಿಕೆ ನೀಡಿದ್ದರು.

ನಂತರದಲ್ಲಿ ’ಮೂಕನಾಯಕ’ ಸಂಸ್ಥೆಯನ್ನು ಕಟ್ಟಿದ ಮೀನಾ ನಿರಂತರವಾಗಿ ಜಾತಿ ಅಸಮಾನತೆಯ ಭಾರತವನ್ನು ಅನಾವರಣ ಮಾಡುತ್ತಾ ಬಂದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರು ’ಮೂಕನಾಯಕ’ ಪತ್ರಿಕೆಯನ್ನು ಆರಂಭಿಸಿ ಸಮುದಾಯವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಆ ಹೆಸರನ್ನೇ ತಮ್ಮ ಜಾಲತಾಣಕ್ಕೆ ಇಟ್ಟುಕೊಂಡಿರುವ ಮೀನಾ ಅವರು, ರಾಮಮಂದಿರದ ಸುದ್ದಿಯಿಂದಾಗಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X