ತಲ ತಲಾಂತರಗಳಿಂದ ನಮ್ಮ ಹೊಲಗಳಲ್ಲಿ ನಾಟಿ ಬೀಜಗಳನ್ನೆ ಬಿತ್ತಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದೇವೆ. ನಾಟಿ ಬೀಜಗಳು ಭೂತಾಯಿ ಮಕ್ಕಳಿದ್ದಂತೆ ಎಂದು ಬೆರಕೆ ಸೊಪ್ಪುಗಳ ಜ್ಞಾನಧಾತೆ ಮೈಲಾಪುರ ಕದಿರಮ್ಮ ಹೇಳಿದರು.
ಪೀಪಲ್ ಟ್ರೀ ಹಾಗೂ ಜನಪರ ಫೌಂಡೇಷನ್ ಸಹಯೋಗದಲ್ಲಿ ಕುರಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಆಯೋಜಿಸಿದ್ದ, ಕೆರೆ ನಾಟಿನ ನಾಟಿ ಬೀಜಗಳ ಸಮಾಗಮದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆ ಬೀಜಗಳನ್ನೇ ನಮ್ಮ ನೆಲದ ತಾಯಿ ಅಪ್ಪಿಕೊಳ್ಳೋದು, ಒಪ್ಪಿಕೊಳ್ಳೋದು. ಅವುಗಳನ್ನು ಬಿತ್ತಿದ್ರೇನೆ ಹೊಲಕ್ಕೂ ಕಳೆ. ಹಿಂದೆ ನಾವೂ ಅಂಗಡಿಗಳಿಗೆ ಹೋಗಿ ಬೀಜ ಕೊಳ್ಳುತ್ತಿದ್ದ ಉದಾಹರಣೆಗಳೇ ಇಲ್ಲ ಎಂದರು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿ ರಾಮಚಂದ್ರ ನಾಯಕ್ ಮಾತನಾಡಿ, ನಾಟಿ ಬೀಜಗಳು ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವಂತಹ ಅಪಾರವಾದ ಸಂಪತ್ತು. ಅದನ್ನು ಎಲ್ಲರೂ ಕಾಪಾಡಿಕೊಳ್ಳಬೇಕಿದೆ. ಎಷ್ಟೇ ತಂತ್ರಜ್ಞಾನ ಆಧುನಿಕರಣ ಬಂದರೂ ಹಿಂದಿನ ಕಾಲದಲ್ಲಿ ಕೃಷಿ ಪದ್ಧತಿಗಳು, ನಾಟಿ ಬೀಜಗಳೇ ಆಹಾರ ಪರಂಪರೆಯನ್ನು ಎತ್ತಿ ಹಿಡಿಯುತ್ತವೆ. ನಾವೂ ಕೂಡ ರೈತರಿಗೆ ಇತ್ತೀಚಿನ ದಿನಗಳಲ್ಲಿ ಸುಸ್ಥಿರ ಬೇಸಾಯಗಳ ಬಗ್ಗೆ ಒತ್ತಿ ಹೇಳುತ್ತಿದ್ದೇವೆ. ಹಳೆಯ ಉತ್ತಮ ಕೃಷಿ ಪದ್ಧತಿಗಳು ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.
ಪೀಪಲ್ ಟ್ರೀ ಚನ್ನಕೇಶವ ಮಾತನಾಡಿ, ನಮ್ಮ ನೆಲದ ದುಡಿವ ಜನರ ಬದುಕನ್ನು ಹಸನಾಗಿ ಇಟ್ಟಿದ್ದ ನಾಟಿ ಬೀಜಗಳನ್ನು ಉಳಿಸಿ, ಬೆಳೆಸುವ ನಿಟ್ಡಿನಲ್ಲಿ ಈ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ಇಂತಹ ಕಾರ್ಯಾಗಾರವನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನಡೆಸಿ ಜನ ಹಿನ್ನೆಲೆಯ ಮೂಲಕ ನಾಟಿ ಬೀಜಗಳ ಬಗ್ಗೆ ಮಾಹಿತಿ ಪಡೆಯುವುದು, ಅವುಗಳನ್ನು ಸಂರಕ್ಷಿಸಿ, ಬೆಳೆಸಿ ಜನ ಜನರ ನಡುವೆ ಹಂಚಿಕೆ ಮಾಡುವ ಹಿರಿಯ ತಲೆಮಾರಿನ ಪದ್ದತಿಗಳನ್ನು ಮರುಕಟ್ಟಲು ಕಾರ್ಯಾಗಾರಗಳನ್ನು ಮಾಡುತ್ತಿದ್ದೇವೆ ಎಂದರು.
ಜನಪರ ಫೌಂಡೇಷನ್ ಸಂಸ್ಥೆಯ ಶಶಿರಾಜ್ ಹರತಲೆ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಜನರು ಕೆರೆಗಳ ನಾಡು, ಪಂಚ ನದಿಗಳ ಬೀಡು, ಗುಡ್ಡಗಾಡು, ಹುಲ್ಲುಗಾವಲು ಪ್ರದೇಶ, ಬಯಲು ಸೀಮೆ ಪ್ರದೇಶ ಅಂತಲು ಗುರುತಿಸಬಹುದು. ಈ ಭಾಗದಲ್ಲಿ ಐದಾರು ನದಿಗಳು ಹರಿದ ಗುರುತುಗಳಿವೆ. ಮಳೆ ಅವಲಂಬನೆಯ ಕೃಷಿ ಇಲ್ಲಿ ಪ್ರಧಾನವಾಗಿದೆ.ನದಿ ಹರಿಯುವ ಪ್ರದೇಶ, ಗುಡ್ಡಗಾಡು, ಸಮತಟ್ಟು ಹೊಲಗಳಲ್ಲಿ ವೈವಿದ್ಯಮಯವಾಗಿ ಬೆಳೆಯುವ ಅಗಾಧವಾದ ನಾಟಿ ಸಂಪತ್ತು ನಮ್ಮ ಈ ಭಾಗದಲ್ಲಿತ್ತು ಎಂಬುದಕ್ಕೆ ಅನೇಕ ಪುರಾವೆಗಳಿವೆ. ನಮ್ಮಲ್ಲಿ ಸಾಮಾನ್ಯವಾಗಿ ಪೂರ್ವ ಮುಂಗಾರು ತಡವಾಗಿ ಆರಂಭವಾಗುತ್ತದೆ. ಅದಕ್ಕೆ ಹೊಂದಿಕೊಳ್ಳುವಂತಹ ಅನೇಕ ತರಹದ ನಾಟಿ ಬೀಜಗಳಿವೆ ಎಂದರು.
ಆದಾಯದಲ್ಲಿನ ಉಳಿಕೆ ಹಣವನ್ನು ಕಳ್ಳಕಾಕರಿಂದ ಸುರಕ್ಷಿತವಾಗಿಡಲು ದುಡ್ಡಿನ ಬ್ಯಾಂಕ್‌ಗಳಿವೆ. ಅಪಘಾತ ಮತ್ತು ಅನಾರೋಗ್ಯದ ಸಂದರ್ಭಗಳಲ್ಲಿ ರಕ್ತದ ಶೀಘ್ರ ಪೂರೈಕೆಗಾಗಿ ಬ್ಲಡ್ ಬ್ಯಾಂಕ್‌ಗಳಿವೆ. ಜನರಿಗೆ ಆಹಾರ, ಬದುಕನ್ನು ನೀಡುವ ನಾಟಿ ಬೀಜಗಳ ಬ್ಯಾಂಕ್ ಕೂಡ ಮಾಡಬೇಕಿದೆ. ಇದರಿಂದ ಅಳಿವಿನಂಚಿನಲ್ಲಿರುವ ಬೆರಳೆಣಿಕೆಯಷ್ಟು ಸ್ಥಳಿಯ ಬೀಜಗಳು, ತಳಿಗಳನ್ನು ಉಳಿಸಿದಂತಾಗುತ್ತದೆ ಎಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ ಅಳಿವಿನ ಅಂಚಿನಲ್ಲಿರುವ ನಾಟಿ ಬೀಜಗಳಾದ ಅರ ಸಾಮೆ, ಅಂಡು ಕೊರ್ರ, ಎರ್ರ ಕೊರಲು, ತೆಲ್ಲ ಸಾಮಲುನಲ್ಲ ಸಾಮಲು, ಗುತ್ತಿ ಶೆಣಕಾಯಿ, ಚಿಕ್ಕಡಕಾಯಿ, ಆಮಾದುಮು, ಕಾಕಮಾರ ಜೊನ್ನ, ಸೀತಮ್ಮ ಜೊನ್ನ ಎರ್ರನೂಗಲು, ನಲ್ಲ ಅನಪ ಗಿಂಜಲು, ನಾಟಿ ಕಂದಿಲು ಎರ್ರಿನೂಗಲು, ಹಿಪ್ಪೆ, ಎರೆಮಾದಲು, ಕಾನುಗ ಹೀಗೆ ಜನಭಾಷೆಯ ತೆಲಗನ್ನಡದಲ್ಲಿ ಕರೆಯುವ ನಾಟಿ ಬೀಜಗಳು ಸಮಾಗಮಗೊಂಡಿದ್ದವು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ತನ್ವೀರ್ ಅಹಮದ್, ಸಂಧ್ಯ, ಜೈವಿಕ ಇಂಧನ ಕೇಂದ್ರದ ವೆಂಕಟೇಶ್, ನಾಟಿ ಬೀಜ ಸಂರಕ್ಷಕ ಬಂಡಕೋಟೆ ರತ್ನಮ್ಮ, ಸಂಪನ್ಮೂಲ ವ್ಯಕ್ತಿಗಳಾದ ಸಾಯಿಲ್ ವಾಸು, ಸಮಾಗಮ ಉಷಾ ರಾವ್, ಮುಳಬಾಗಿಲು ಪ್ರಭಾಕರ್, ದ್ವಿಜಿ ಗುರು, ಯುವ ರೈತರಾದ ಮೈಲಾಪುರ ರವಿ, ನಾಗಸಂದ್ರ ಗಡ್ಡೆ ಸುರೇಶ್, ಕೊಡಿಗೆಹಳ್ಳಿ ದೇವರಾಜ್, ಸೋರಪಲ್ಲಿ ಪುಷ್ಪ, ನಾರಮಾಕಲ ಹಳ್ಳಿ ಚಲಪತಿ ಹುಲುಗುಮ್ಮನ ಹಳ್ಳಿ ಮಂಜುನಾಥ್, ಪೀಪಲ್ ಟ್ರೀ ಮತ್ತು ಜನಪರ ಫೌಂಡೇಷನ್ ಕಾರ್ಯಕರ್ತರು ಸೇರಿದಂತೆ ಮಹಿಳಾ ರೈತರು, ಯುವ ರೈತರು ಹಾಗೂ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ 50ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.