ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ರಂಜಿತಾ (29) ಸಾವನಪ್ಪಿದ ದುರ್ದೈವಿ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ರಂಜಿತಾ ಅವರು ತುಮಕೂರು ಜಿಲ್ಲೆ ತುರುವೇಕೆರೆ ಮೂಲದ ಮಧು ಅವರನ್ನು ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ.
ರಂಜಿತಾಗೆ ಆಕೆಯ ಪತಿ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ರಂಜಿತಾ ಮನೆಯವರು ಆರೋಪಿಸಿದ್ದಾರೆ.
ಮೃತ ಮಹಿಳೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಮಧು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದಾಗಿನಿಂದಲೂ ರಂಜಿತಾಗೆ ಆಕೆಯ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಜೊತೆಗೆ ಜಗಳವಾಡುತ್ತಿದ್ದರು. ವರದಕ್ಷಿಣೆ ನೀಡಬೇಕೆಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ರಂಜಿತಾಗೆ ಕಿರುಕುಳ ನೀಡುತ್ತಿದ್ದರು ಎಂದು ಸ್ವತಃ ರಂಜಿತಾ ತನ್ನ ಪೋಷಕರ ಜೊತೆಗೆ ಆಗಾಗ ಈ ವಿಚಾರವನ್ನು ಹೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವ್ಹೀಲಿಂಗ್ | ಅಪ್ರಾಪ್ತನಿಗೆ ವಾಹನ ಕೊಟ್ಟ ಮಾಲೀಕನಿಗೆ ₹25,200 ದಂಡ ವಿಧಿಸಿದ ನ್ಯಾಯಾಲಯ
ಮಂಗಳವಾರವೂ ಕೂಡ ಪತ್ನಿಯ ಜತೆಗೆ ಪತಿ ಜಗಳ ಆರಂಭ ಮಾಡಿದ್ದಾರೆ. ಈ ವೇಳೆ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ರಂಜಿತಾ ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದರು. ಬಳಿಕ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಜ್ಞಾನಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.