ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿದ್ದ ಚಿತ್ರದುರ್ಗ ನಗರ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರು ಸ್ವಯಂ ಪ್ರೇರಿತವಾಗಿ ಬಂದ್ಗೆ ಕೈ ಜೋಡಿಸಿದ್ದು, ನಗರ ನಿಧಾನವಾಗಿ ಸ್ತಬ್ಧವಾಗುತ್ತಿದೆ.
ಬೆಳಿಗ್ಗೆ 7 ಗಂಟೆಯಿಂದಲೇ ನಗರ ವ್ಯಾಪ್ತಿಯಲ್ಲಿ ಬಸ್, ಆಟೊ ಸೇರಿ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ವಿವಿಧ ಸಂಘ ಸಂಸ್ಥೆಗಳ ಮುಖಂಡರು ಬಂದ್ಗೆ ಬೆಂಬಲ ಘೋಷಿಸಿರುವುದರಿಂದ ಅಂಗಡಿ, ವ್ಯಾಪಾರ ವಹಿವಾಟು ಬಂದ್ ಆಗಿದೆ. ನಗರದ ಖಾಸಗಿ ಶಾಲಾ ಕಾಲೇಜ್ಗಳು ಬಂದ್ಗೆ ನೈತಿಕ ಬೆಂಬಲ ಸೂಚಿಸಿದ್ದು, ಶಾಲೆಗಳಿಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ.
ನಗರದಲ್ಲಿ ಕಾರ್ಮಿಕರ, ರೈತಪರ, ಕನ್ನಡ ಪರವೂ ಸೇರಿದಂತೆ 20 ಹೆಚ್ಚು ಸಂಘಟನೆಗಳು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿವೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಹಿಸಿದ್ದಾರೆ. ಕೆಲ ಖಾಸಗಿ ಬಸ್ಗಳು ರಾತ್ರಿಯೇ ನಗರದ ಹೊರ ವಲಯದಲ್ಲಿ ನಿಲ್ಲಿಸಿ ಅಲ್ಲಿಂದ ಚಳ್ಳಕೆರೆ, ನಾಯಕನಹಟ್ಟಿ, ಜಗಳೂರು, ದಾವಣಗೆರೆಗೆ ಸಂಚರಿಸುತ್ತಿವೆ.
ಕಳೆದ 25ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ರಾಜ್ಯದ ಯಾವುದೇ ನೀರಾವರಿ ಯೋಜನೆ ಇಷ್ಟು ಸುಧೀರ್ಘ ಸಮಯ ತೆಗೆದುಕೊಂಡಿಲ್ಲ. ಸುಳ್ಳಿನ ರಾಜಕಾರಣ, ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಯೋಜನೆ ಸಾಕಾರವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ ಬಜೆಟ್ ನಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ಅನುದಾನ ಮೀಸಲಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಆಟೋ ಚಾಲಕರು, ಲಘು ವಾಹನ ಚಾಲಕರು, ಸಿನಿಮಾ ಮಂದಿರದ ಮಾಲೀಕರು ಗಾರ್ಮೆಂಟ್ಸ್, ವಾಹನ ಶೋ ರೂಂ, ಬಟ್ಟೆ ಅಂಗಡಿಗಳು, ಬಂಗಾರದ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಎಪಿಎಂಸಿ ವರ್ತಕರು ಹಮಾಲರು, ಕನ್ನಡ ಪರ ಸಂಘಟನೆಗಳು, ಕಟ್ಟಡ ಕಾರ್ಮಿಕ ಸಂಘಟನೆಗಳು, ಟೈಲ್ಸ್ ಮತ್ತು ಗ್ರಾನೈಟ್ ಸಂಘಟನೆ ಮುಖ್ಯಸ್ಥರು ಹಾಗು ಹೊಟೇಲ್ ಮಾಲೀಕರು ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ನೀರಾವರಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹಾಗೂ ವಿವಿಧ ಸಂಘಟನೆಗಳ ಮುಂದಾಳತ್ವದಲ್ಲಿ ಬಂದ್ ನಡೆಯುತ್ತಿದ್ದು, ಬಿ.ಡಿ.ರಸ್ತೆ, ಗಾಂಧಿ ವೃತ್ತ, ಚಳ್ಳಕೆರೆ ರಸ್ತೆ, ಹೊಳಲ್ಕೆರೆ ಮಾರ್ಗ, ಮೆದೇಹಳ್ಳಿ ರಸ್ತೆಗಳು ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು.