1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ದಿನಗಳು, ಕೋಮುಗಲಭೆಗಳು ಭುಗಿಲೆದ್ದಿದ್ದ ಸಂದರ್ಭ “ಎಲ್ಲ ಧರ್ಮಗಳನ್ನೂ ಗೌರವಿಸುವಂತೆ ಹಿಂದೂ ಧರ್ಮವೇ ನನಗೆ ಹೇಳಿಕೊಟ್ಟಿದೆ. ರಾಮರಾಜ್ಯದ ರಹಸ್ಯವಿರುವುದೇ ಈ ತತ್ವದಲ್ಲಿ” ಎಂದು ಹೇಳಿದ್ದರು ಗಾಂಧೀಜಿ
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ರಾಜಕಾರಣವನ್ನೇ ಧರಿಸಿ ನಿಂತ ಹೊತ್ತು. ರಾಮರಾಜ್ಯ ಎಂಬ ಪದದ ಪ್ರಸ್ತಾಪ ಪುನಃ ಪುನಃ ಕೇಳಿಬರುತ್ತಿದೆ. ರಾಮರಾಜ್ಯವೆಂಬುದು ಆದರ್ಶರಾಜ್ಯದ ಪರಿಕಲ್ಪನೆ. ವನವಾಸ ಮುಗಿಸಿ ಅಯೋಧ್ಯೆಗೆ ವಾಪಸು ಬಂದ ರಾಮ ದೊರೆ ಪಟ್ಟವನ್ನೇರಿ ನಡೆಸಿದ ಆಡಳಿತವೇ ರಾಮರಾಜ್ಯ. ಮನುಷ್ಯನಿರಲಿ, ಪಶುಪ್ರಾಣಿಗಳ ದೂರನ್ನೂ ರಾಮನ ರಾಜ್ಯದಲ್ಲಿ ಆಲಿಸಿ ನ್ಯಾಯ ನೀಡಲಾಗುತ್ತಂತೆ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವ ದಿನಗಳು, ಕೋಮುಗಲಭೆಗಳು ಭುಗಿಲೆದ್ದಿದ್ದ ಸಂದರ್ಭ “ಎಲ್ಲ ಧರ್ಮಗಳನ್ನೂ ಗೌರವಿಸುವಂತೆ ಹಿಂದೂ ಧರ್ಮವೇ ನನಗೆ ಹೇಳಿಕೊಟ್ಟಿದೆ. ರಾಮರಾಜ್ಯದ ರಹಸ್ಯವಿರುವುದೇ ಈ ತತ್ವದಲ್ಲಿ” ಎಂದು ಹೇಳಿದ್ದರು ಗಾಂಧೀಜಿ. ಪ್ರಧಾನಮಂತ್ರಿ ಮೋದಿಯವರೂ ರಾಮರಾಜ್ಯ ಪದವನ್ನು ಬಳಸಿದ್ದಾರೆ. ಈ ಪದವನ್ನು ಮಹಾತ್ಮ ಗಾಂಧೀ ಹೇಗೆ ವ್ಯಾಖ್ಯಾನಿಸಿದ್ದಾರೆ ಎಂಬುದನ್ನು ಕೂಡ ಅವರು ಹೇಳಿದ್ದುಂಟು. ಹತ್ತು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಆಡಿದ್ದ ಮಾತುಗಳು- ‘ಆಡಳಿತ ಅಥವಾ ಸರ್ಕಾರ ಹೇಗಿರಬೇಕೆಂದು ಜನ ಕೇಳುತ್ತಿದ್ದಾಗ ಮಹಾತ್ಮ ಗಾಂಧೀಜಿ ಒಂದೇ ಪದದಲ್ಲಿ ವಿವರಿಸಿ ಹೇಳುತ್ತಿದ್ದರು. ಜನಕಲ್ಯಾಣ ಬಯಸುವ ಪ್ರಭುತ್ವವು ರಾಮರಾಜ್ಯದಂತೆ ಇರಬೇಕು ಎನ್ನುತ್ತಿದ್ದರು. ದುಃಖಿಗಳೇ ಇಲ್ಲದ ಸುಖಿಗಳ ನಾಡು ಅದು’ ಎಂದು ಮೋದಿ ಬಣ್ಣಿಸಿದ್ದರು.
‘ಉತ್ತರಪ್ರದೇಶವೇ ರಾಮರಾಜ್ಯದ ಭೂಪ್ರದೇಶ. ಈ ಆಶಯದಿಂದಲೇ ಮುಂದುವರೆದಿರುವ ರಾಜ್ಯವಿದು. ಕೇವಲ ಆರ್ಥಿಕ ಸಮೃದ್ಧಿ, ಅಭಿವೃದ್ಧಿಶೀಲ ಸಮಾಜ ಹಾಗೂ ರಾಜಕೀಯ ನಿಯತ್ತು ಮಾತ್ರವೇ ಪ್ರತಿಯೊಬ್ಬ ಪ್ರಜೆಯ ಬದುಕಿಗೆ ಸಂತಸ ತರಬಲ್ಲದು’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವರ್ಷದೊಪ್ಪತ್ತಿನ ಹಿಂದೆ ಅಂದಿದ್ದರು.
ರಾಮರಾಜ್ಯ ಎಂಬ ಆದರ್ಶ ರಾಜ್ಯದ ಕನಸನ್ನು ಗಾಂಧೀಜಿ ಕೂಡ ಕಂಡಿದ್ದರು. ಆದರೆ ಅವರು ಕಂಡ ರಾಮರಾಜ್ಯ ಯಾವುದೇ ನಿರ್ದಿಷ್ಟ ಧರ್ಮದ ಪ್ರಾಬಲ್ಯವನ್ನು ಪ್ರತಿಪಾದಿಸಲಿಲ್ಲ. ಬದಲಾಗಿ ರಾಮರಾಜ್ಯದ ಕೇಂದ್ರಬಿಂದುವಿನಲ್ಲಿ ನ್ಯಾಯ, ಸಮಾನತೆ ಹಾಗೂ ಸತ್ಯವೆಂಬ ನೈತಿಕ ಮೌಲ್ಯಗಳಿದ್ದವು. ನ್ಯಾಯ ಮತ್ತು ಸಮಾನತೆಯು ನಮ್ಮ ಸಮಾಜದ ಅತ್ಯಂತ ಕಟ್ಟಕಡೆಯ ಮನುಷ್ಯನಿಗೂ ಸಿಗಬೇಕೆಂದು ಅವರು ಬಯಸಿದ್ದರು.
ರಾಮರಾಜ್ಯವೆಂದರೆ ಹಿಂದೂ ರಾಜ್ಯ ಅಲ್ಲವೆಂದು ಹಿಂದ್ ಸ್ವರಾಜ್ (1929) ಕೃತಿಯಲ್ಲಿ ಗಾಂಧೀಜಿ ನಿಚ್ಚಳವಾಗಿ ಹೇಳಿದ್ದಾರೆ. ‘ರಾಮರಾಜ್ಯವೆಂದರೆ ದೈವೀಕ ರಾಜ್ಯ, ಭಗವಂತನ ರಾಜ್ಯ. ರಾಮ ಮತ್ತು ರಹೀಮ ಇಬ್ಬರೂ ನನ್ನ ಪಾಲಿಗೆ ಒಂದೇ ದೇವರು. ಸತ್ಯ ಮತ್ತು ನ್ಯಾಯನಿಷ್ಠತೆಯೇ ನನ್ನ ದೇವರು. ಈ ದೇವರ ವಿನಾ ಬೇರೆ ಯಾವುದೇ ಬೇರೆ ದೇವರನ್ನು ನಾನು ಸ್ವೀಕರಿಸುವುದಿಲ್ಲ’ ಎಂದಿದ್ದಾರೆ.
‘ನನ್ನ ಕಲ್ಪನೆಯ ರಾಮ ಯಾವ ಕಾಲಕ್ಕಾದರೂ ಈ ಭೂಮಿಯ ಮೇಲೆ ಇದ್ದನೋ ಇಲ್ಲವೋ. ಆದರೆ ರಾಮರಾಜ್ಯದ ಪ್ರಾಚೀನ ಆದರ್ಶವು ನೈಜ ಪ್ರಜಾತಂತ್ರದ ಪ್ರತೀಕ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಂತಹ ರಾಮರಾಜ್ಯದಲ್ಲಿ ಅತ್ಯಂತ ಕಟ್ಟಕಡೆಯ ಮನುಷ್ಯ ಕೂಡ ವಿಳಂಬ ಮತ್ತು ವೆಚ್ಚವಿಲ್ಲದ ತ್ವರಿತ ನ್ಯಾಯವನ್ನು ಪಡೆಯಬಹುದು. ರಾಮರಾಜ್ಯದಲ್ಲಿ ನಾಯಿಗೆ ಕೂಡ ನ್ಯಾಯ ಪಡೆದಿರುವ ಉದಾಹರಣೆಯನ್ನು ಕವಿ ಬಣ್ಣಿಸಿದ್ದಾನೆ’.
ವಾಲ್ಮೀಕಿ ರಾಮಾಯಣದ ಪ್ರಕಾರ ನಾಯಿಯೊಂದು ಅಯೋಧ್ಯೆಯ ನ್ಯಾಯಾಲಯಕ್ಕೆ ದೂರು ನೀಡುತ್ತದೆ. ಭಿಕ್ಷುಕ ಬ್ರಾಹ್ಮಣನೊಬ್ಬ ತನಗೆ ಹೊಡೆದು ಗಾಯ ಉಂಟು ಮಾಡಿದ ಕುರಿತ ದೂರು ಅದಾಗಿರುತ್ತದೆ. ದೂರನ್ನು ಆಲಿಸಿದ ರಾಮ, ಶಿಕ್ಷೆಯನ್ನು ನಾಯಿಯೇ ತೀರ್ಮಾನಿಸಲಿ ಎಂದು ತೀರ್ಪು ಹೇಳುತ್ತಾನೆ. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತ ಉತ್ತಮ ಜೀವನ ನಡೆಸುವಷ್ಟು ಸಂಪನ್ಮೂಲಗಳನ್ನು ಹೊಂದಬಹುದಾದ ಹುದ್ದೆಯನ್ನು ಬ್ರಾಹ್ಮಣನಿಗೆ ನೀಡುವುದೇ ಶಿಕ್ಷೆಯೆನ್ನುತ್ತದೆ ನಾಯಿ!
ಭಾರತದಲ್ಲಿ ಮೈ ತಳೆಯುತ್ತಿರುವುದು ಯಾವ ರಾಮರಾಜ್ಯ? ಗಾಂಧೀಜಿ ಪ್ರತಿಪಾದಿಸಿದ್ದೋ ಅಥವಾ ಮೋದಿ-ಯೋಗಿ ಪಾಲಿಸುತ್ತಿರುವುದೋ?
ರಾಮರಾಜ್ಯವೆಂದರೆ ದುಃಖಿಗಳೇ ಇಲ್ಲದ ಸುಖಿಗಳ ನಾಡು ಎನ್ನುತ್ತಾರೆ ಮೋದಿ. ಆರ್ಥಿಕ ಸಮೃದ್ಧಿ, ಅಭಿವೃದ್ಧಿಶೀಲ ಸಮಾಜ ಹಾಗೂ ರಾಜಕೀಯ ನಿಯತ್ತುಗಳೇ ರಾಮರಾಜ್ಯದ ಸಾರ ಎನ್ನುತ್ತಾರೆ ಯೋಗಿ. ತಾವು ಆಡಿರುವ ಈ ಮಾತುಗಳನ್ನು ಈ ಸಂದರ್ಭದಲ್ಲಿ ಇಬ್ಬರೂ ಮತ್ತೊಮ್ಮೆ ಮನನ ಮಾಡಿಕೊಳ್ಳಲಿ. ತಾವು ಹಾಗೆ ಹೇಳಿಲ್ಲವೆಂದಾದಲ್ಲಿ ತಳ್ಳಿ ಹಾಕಲಿ. ಹೇಳಿದ್ದೇ ಹೌದಾಗಿದ್ದರೆ ಅವುಗಳನ್ನು ನಡೆಸಿಕೊಡಲಿ.
