ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಮುಸ್ಲಿಂ ಯುವಕರನ್ನು ಹಾಡಹಗಲೇ ಸಾರ್ವಜನಿಕ ಪ್ರದೇಶದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
14 ದಿನಗಳ ಜೈಲು ಶಿಕ್ಷೆಗೆ ಗುರಿಪಡಿಸಿದ ನಾಲ್ವರು ಪೊಲೀಸರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಬಿ ಆರ್ ಗವಾಯಿ ಹಾಗೂ ಸಂದೀಪ್ ಮೆಹತಾ ನೇತೃತ್ವದ ಪೀಠವು ಆರೋಪಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಪೊಲೀಸರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವುದು ಕಾನೂನಿನ ಅಡಿ ಬರುತ್ತದೆಯೆ ಎಂದು ಪ್ರಶ್ನಿಸಿತು.
“ಸಾರ್ವಜನಿಕ ಸ್ಥಳದಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿ ವಿಡಿಯೋ ದೃಶ್ಯ ಮಾಡುವುದು ಎಂತಹ ರೀತಿಯ ದೌರ್ಜನ್ಯಗಳು? ಎಂದು ಪೀಠವು ಪ್ರಶ್ನಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯಾವುದು ರಾಮರಾಜ್ಯ? ಗಾಂಧೀಜಿ ಹೇಳಿದ್ದೇ, ಪ್ರಧಾನಿ ಪಾಲಿಸುತ್ತಿರುವುದೇ?
2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಖೇಡ ಜಿಲ್ಲೆಯ ಉಂಡೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾರ್ಬಾ ಕಾರ್ಯಕ್ರಮ ನಡೆಯುವಾಗ ಮುಸ್ಲಿಂ ಸಮುದಾಯ ಒಳಗೊಂಡ ಕೆಲವರು ಕಲ್ಲು ತೂರಾಟ ನಡೆಸಿದ್ದರು. ಗಲಭೆಯಲ್ಲಿ ಕೆಲವು ಗ್ರಾಮಸ್ಥರು ಹಾಗೂ ಪೊಲೀಸರು ಗಾಯಗೊಂಡಿದ್ದರು. ಬಂಧಿತ 13 ಮಂದಿಯಲ್ಲಿ ಮೂವರನ್ನು ಪೊಲೀಸರು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ 2023, ಅಕ್ಟೋಬರ್ 19ರಂದು ಆರೋಪಿ ಪೊಲೀಸರಿಗೆ ಕಸ್ಟಡಿ ಚಿತ್ರಹಿಂಸೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯದ ನಿಂದನೆಯ ಅಡಿಯಲ್ಲಿ 14 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ ಪೊಲೀಸರು ಇದು ಶಾಸನಬದ್ಧ ಮೇಲ್ಮನವಿಯಾಗಿದೆ. ಇದನ್ನು ಒಪ್ಪಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
14 ದಿನಗಳ ಜೈಲು ಶಿಕ್ಷೆಯ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡುವ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ, “ಈಗ ಕಸ್ಟಡಿಯನ್ನು ಆನಂದಿಸಿ, ನೀವು ನಿಮ್ಮ ಸ್ವಂತ ಅಧಿಕಾರಿಗಳ ಅತಿಥಿಯಾಗುತ್ತೀರಿ” ಎಂದು ಹೇಳಿದರು.