ಕಾರಿನ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಚಾಲಕ ಹಲವು ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಜನವರಿ 15ರಂದು ಬೆಂಗಳೂರಿನ ಮಲ್ಲೇಶ್ವರಂನ ಮಾರಮ್ಮ ದೇವಸ್ಥಾನದ ವೃತ್ತದಲ್ಲಿ ಈ ಘಟನೆ ನಡೆದಿದೆ. ಇದು ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣವಾಗಿದೆ ಎಂದು ಹೇಳಲಾಗಿದೆ.
ಡಿಕ್ಕಿಯ ರಭಸಕ್ಕೆ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರು ಚಾಲಕ ಹಲವು ಮೀಟರ್‌ಗಳಷ್ಟು ದೂರಕ್ಕೆ ಎಳೆದೊಯ್ದಿದ್ದಾನೆ. ಸದ್ಯ ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಕಾರು ಚಾಲಕ ಮಹಮ್ಮದ್ ಮುನೀರ್ ವಿರುದ್ಧ ಎನ್.ಸಿ.ಆರ್ ದಾಖಲು ಮಾಡಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಣರಾಜ್ಯೋತ್ಸವ ದಿನ | ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ-ಮುತ್ತ ಪೊಲೀಸ್ ಬಂದೋಬಸ್ತ್
ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಅಶ್ವತ್ಥ್ ಅವರ ಕ್ಯಾಬ್ಗೆ ಮಹಮ್ಮದ್ ಮುನೀರ್ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಕಾರು ನಿಲ್ಲಿಸುವಂತೆ ಅಶ್ವತ್ಥ್ ತಿಳಿಸಿದ್ದಾರೆ. ಆದರೆ, ಮುನೀರ್ ವಾಹನ ನಿಲ್ಲಿಸದೆ ಮುಂದಕ್ಕೆ ತೆರಳಲು ಪ್ರಯತ್ನಿಸಿದ್ದರು. ಆಗ, ಅಶ್ವತ್ಥ್ ಅವರು ಕಾರಿನ ಬಾನೆಟ್ ಮೇಲೆ ಹತ್ತಿ ಕೆಳಕ್ಕೆ ಇಳಿಯುವಂತೆ ಮನವಿ ಮಾಡಿದ್ದರು. ಅದನ್ನು ಲೆಕ್ಕಿಸದೇ ಅಶ್ವತ್ಥ್ ಅವರನ್ನು ದೂರಕ್ಕೆ ಎಳೆದೊಯ್ದು ದುಷ್ಕೃತ್ಯ ಎಸಗಿದ್ದಾನೆ.
ಮಲ್ಲೇಶ್ವರದ 18ನೇ ಕ್ರಾಸ್‌ನ ಸಿಗ್ನಲ್ವರೆಗೂ ಆರೋಪಿ ತನ್ನ ಕಾರು ಚಲಾಯಿಸಿದ್ದು, ಸ್ಥಳೀಯರು ಹಿಂದೆ ಓಡಿದರೂ ಕಾರು ನಿಲ್ಲಿಸಿಲ್ಲ. ನಂತರ ಕಾರನ್ನು ನಿಯಂತ್ರಿಸಲು ಸಾಧ್ಯವಾಗದೆ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅಶ್ವತ್ಥ್ ಅವರು ಕೆಳಗೆ ಬಿದ್ದಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
“ಈ ಘಟನೆಗೆ ಸಂಬಂಧಿಸಿದಂತೆ, ಮಲ್ಲೇಶ್ವರಂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಲಾಗಿದೆ. ಮಾರಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ. ದೃಶ್ಯದಲ್ಲಿರುವ ವ್ಯಕ್ತಿಯನ್ನು ಗುರುತಿಸಲಾಗಿದ್ದು, ತನಿಖೆಯ ನಂತರ ಚಾಲಕನ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಅವರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಕಾರಿನ್ ಬಾನೆಟ್ ಮೇಲೆ ಓರ್ವ ವ್ಯಕ್ತಿ ಬಿದ್ದಿದ್ದಾನೆ. ಆದರೆ, ಕಾರು ಚಾಲಕ ವಾಹನ ನಿಲ್ಲಿಸದೇ, ಹಾಗೆಯೇ ಕಾರು ಚಾಲನೆ ಮಾಡಿದ್ದಾನೆ. ಈ ಕಾರಿನ ಹಿಂದೆ ಇಬ್ಬರು ಓಡಿ ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.