ಕಲಬುರಗಿ ಜಿಲ್ಲೆಯ ಕೋಟನೂರ (ಡಿ) ಗ್ರಾಮದಲ್ಲಿ ಲುಂಬುಣಿ ಉದ್ಯಾನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನಗೊಳಿಸಿದ ಕೃತ್ಯ ಸಂವಿಧಾನ ಹಾಗೂ ಕೊಟ್ಯಾಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಬೀದರ್ ನಗರದ ಛತ್ರಪತಿ ಶಿವಾಜಿ ವೃತ್ತದ ಬಳಿ ರಸ್ತೆ ತಡೆ ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಸಲ್ಲಿಸಿದರು
“ಕಲಬುರಗಿ ಜಿಲ್ಲೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿದ ಘಟನೆ ಮತ್ತು ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ದಲಿತ ವಿದ್ಯಾರ್ಥಿಗೆ ಕೋಮುವಾದಿ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಒತ್ತಾಯಪೂರ್ವಕವಾಗಿ ʼಜೈ ಶ್ರೀರಾಮʼ ಘೋಷಣೆ ಕೂಗುವಂತೆ ಬಲವಂತ ಮಾಡಿದ ಎರಡು ಪ್ರಕರಣಗಳು ಜಾತಿವಾದಿ ಸಮುದಾಯಗಳಿಂದ ನಡೆದ ಘಟನೆಗಳಾಗಿವೆ” ಎಂದು ಕಿಡಿಕಾರಿದರು.

“ಸಮ ಸಮಾಜದ ಪರಿಕಲ್ಪನೆ ಹೊಂದಿರುವ ಹಾಗೂ ಸರ್ವರಿಗೂ ಸಮಾನತೆ ಭಾವನೆಯನ್ನು ತಿಳಿಸುವ ಸಂವಿಧಾನದ ಅಡಿಯಲ್ಲಿ ನಡೆಯುವ ಈ ದೇಶದಲ್ಲಿ ಕೆಲ ಕೊಮುವಾದಿ ಶಕ್ತಿಗಳು ಇಂತಹ ರೀತಿಯ ವರ್ತನೆಗಳನ್ನು ಮಾಡುತ್ತಿರುವುದು ದೇಶಕ್ಕೆ ಮಾರಕವಾಗಿದೆ. ಇಂತಹ ಪ್ರಕರಣಗಳು ದೇಶದಲ್ಲಿ ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು. ಕೃತ್ಯದಲ್ಲಿ ಭಾಗಿಯಾದ ದೇಶ ವಿರೋಧಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು” ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತ ವಿದ್ಯಾರ್ಥಿಗೆ ʼಜೈ ಶ್ರೀರಾಮ್ʼ ಹೇಳುವಂತೆ ಒತ್ತಾಯ; ಹಲ್ಲೆ ಆರೋಪ
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖ ಮುಖಂಡರಾದ ಮಾರುತಿ ಬೌದ್ದೆ, ವಿಠಲದಾಸ ಪ್ಯಾಗೆ, ಬಾಬು ಪಾಸ್ವಾನ್, ಅನೀಲಕುಮಾರ ಬೇಲ್ದಾರ, ಅಮೃತರಾವ ಚಿಮಕೋಡೆ, ರಮೇಶ ಡಾಕುಳಗಿ, ರಾಜಕುಮಾರ ಮೂಲಭಾರತಿ, ಶ್ರೀಪತರಾವ ದೀನೆ, ಅಂಬಾದಾಸ ಗಾಯಕವಾಡ, ಮಾರುತಿ ಕಂಟಿ, ಅಶೋಕ ಮಾಳಗೆ, ಶಿವಕುಮಾರ ನೀಲಿಕಟ್ಟಿ, ರಘುನಾಥ ಗಾಯಕವಾಡ, ಶಾಲಿವಾನ ಬಡಿಗೇರ, ಬಾಬುರಾವ ಮಿಠಾರೆ, ರಮೇಶ ಪಾಸ್ವಾನ್, ಪ್ರದೀಪ ನಾಟೇಕರ್, ಅವಿನಾಶ ದೀನೆ, ಸಂದೀಪ ಕಾಂಟೆ, ಸಾಯಿ ಸಿಂಧೆ, ಜೀವನ ಬುಡ್ತಾ, ಧನರಾಜ ಮುಸ್ತಾಪೂರ, ರಾಹುಲ ಡಾಂಗೆ, ಸತೀಶ ಲಕ್ಕಿ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.