- ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡ ಅನ್ಯ ಪಕ್ಷದ ಮುಖಂಡರು
- ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿಸುವ ಶಪಥಗೈದ ನಾಯಕರು
ಮಾಜಿ ವಿಧಾನಪರಿಷತ್ ಸದಸ್ಯ ಕಾಂಗ್ರೆಸ್ ಮುಖಂಡ ರಘು ಆಚಾರ್, ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಸೇರ್ಪಡೆ ಗೊಂಡರು.
ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಅನ್ಯ ಪಕ್ಷದ ಮುಖಂಡರು ಜಾತ್ಯಾತೀತ ಜನತಾದಳ ಸೇರಿದರು.
ಇವರ ಜೊತೆಗೆ ಅಪಾರ ಸಂಖ್ಯೆಯ ಬೆಂಬಲಿಗರೂ ಜಾತ್ಯಾತೀತ ಜನತಾದಳದ ಕೈ ಹಿಡಿದರು. ಬಳಿಕ ಮಾತನಾಡಿದ ರಘು ಆಚಾರ್ ರಾಜಕಾರಣದಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆ ಮುಖ್ಯ, ಕಾಂಗ್ರೆಸ್ ಪಕ್ಷದಲ್ಲಿ ಅದಕ್ಕೆ ಅವಕಾಶ ಇಲ್ಲದಿದ್ದ ಕಾರಣ ನಾನು ಜಾತ್ಯಾತೀತ ಜನತಾದಳ ಸೇರಿದೆ ಎಂದರು.
ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿಯೇ ತೀರುತ್ತೇವೆ. ನಿಮ್ಮೆಲ್ಲರ ಸಹಕಾರ ಮುಖ್ಯ, ಅಧಿಕಾರಕ್ಕಾಗಿ ನಾನು ಪಕ್ಷ ಸೇರಿಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಆಣತಿಯಂತೆ ಕೆಲಸ ಮಾಡುವೆ. ನನಗೆ ನನ್ನ ಕ್ಷೇತ್ರದ ಜನರೇ ದೊಡ್ಡವರು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? : ಬಿಜೆಪಿಗೆ ಬಂಡಾಯದ ಬಿಸಿ: ಶಾಸಕ ಸ್ಥಾನಕ್ಕೆ ಗೂಳಿಹಟ್ಟಿ ಶೇಖರ್ ರಾಜೀನಾಮೆ
ಬಿಜೆಪಿಯಿಂದ ಜಾತ್ಯಾತೀತ ಜನತಾದಳ ಸೇರಿದ ಗುರು ಪಾಟೀಲ್ ಮಾತನಾಡಿ, ಬಿಜೆಪಿಗೆ ನಾನು ನನ್ನೆಲ್ಲವನ್ನೂ ತ್ಯಾಗ ಮಾಡಿದೆ.ಆದರೆ ಆ ಪಕ್ಷದವರು ನನಗೆ ಮೋಸ ಮಾಡಿದರು. ಸಜ್ಜನನಾಗಿ ಪಕ್ಷಕ್ಕೆ ನಿಷ್ಠೆಯಿಂದ ನಡೆದುಕೊಂಡಿದ್ದಕ್ಕೆ ಅವರು ಮಾಡಿದ ಅಪಮಾನ ನನ್ನ ಕ್ಷೇತ್ರಕ್ಕೆ ಮಾಡಿದ ಅಪಮಾನ. ಶಹಾಪುರದಲ್ಲಿ ನಾನು ಜಾತ್ಯಾತೀತ ಜನತಾದಳ ಬೆಳೆಸುತ್ತೇವೆ. ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.