ತಂತ್ರಜ್ಞಾನ ಸಾಕಷ್ಟು ಮುಂದುವರೆದು ನಾವುಗಳು ಎಷ್ಟೆಲ್ಲ ಸಾಧನೆ ಮಾಡಿದ್ದರೂ, ಸಮಾಜದಲ್ಲಿ ಇಂದಿಗೂ ಹಲವಾರು ಸಾಮಾಜಿಕ ಪಿಡುಗುಗಳು ಜೀವಂತವಾಗಿವೆ. ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಯುವಜನತೆ ಹೋರಾಟ ನಡೆಸಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಕರೆ ನೀಡಿದರು.
ದಾವಣಗೆರೆಯ ಆರ್ ಎಲ್ ಕಾನೂನು ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಮಾದಕ ವಸ್ತುಗಳ ಸೇವನೆ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಇನ್ನೂ ಹಲವು ಸಾಮಾಜಿಕ ಪಿಡುಗುಗಳು ನಮ್ಮನ್ನು ಕಾಡುತ್ತಿವೆ. ಇವುಗಳ ನಿರ್ಮೂಲನೆಗಾಗಿ ಹಲವು ಕಾನೂನುಗಳನ್ನು ತರಲಾಗಿದೆ.ಇವುಗಳ ಸಮರ್ಪಕ ಕಾರ್ಯ ಚಟುವಟಿಕೆಗಳಿಂದಾಗಿ ಸಾಮಾಜಿಕ ಪಿಡುಗುಗಳ ನಿರ್ಮಾಲನೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಈ ಹಿಂದೆ ನಾವುಗಳು ಯಾವುದೇ ಮಾಹಿತಿ ಪಡೆಯಬೇಕಾದರೂ ಗ್ರಂಥಾಲಯ ಅಥವಾ ಅದರ ಬಗ್ಗೆ ಅರಿವಿದ್ದವರ ಬಳಿ ತಿಳಿಯಬೇಕಿತ್ತು ಆದರೀಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು ನಮ್ಮ ಬೆರಳಿನ ತುದಿಯಲ್ಲೇ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣವೇ ಸಿಗುವ ಹಿನ್ನೆಲೆಯಲ್ಲಿ ನಮಗೆ ಕ್ಷಣ ಮಾತ್ರದಲ್ಲೇ ಎಲ್ಲವೂ ತಿಳಿಯುತ್ತದೆ. ಇಷ್ಟಿದ್ದರೂ ಯುವ ಪೀಳಿಗೆ ಹೋರಾಟಗಳಿಂದ ಹಿಂದೆ ಸರಿಯುತ್ತಿರುವುದು ಸರಿಯಲ್ಲ. ಯಾರೇ ಆಗಲಿ ಎಲ್ಲೇ ಆಗಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ತಕ್ಷಣವೇ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸಬೇಕಿದೆ ಎಂದು ಸಲಹೆ ನೀಡಿದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಜಿ. ಸಲಗರ ಮಾತನಾಡಿ ಕಾನೂನುಪದವಿ ಓದಿದ ನಂತರ ನೀವು ನಿರ್ವಹಿಸುವ ಜವಾಬ್ದಾರಿ ಅತ್ಯಂತ ಗೌರವಯುತವಾದದ್ದು ಸಂಕಷ್ಟದಲ್ಲಿರುವ ಜನರಿಗೆ ಸೇವೆ ಮಾಡುವಂತಹ ಕೆಲಸ ನಿಮ್ಮದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಸಂವಿಧಾನ,ಕಾನೂನು ಅಡಿಯಲ್ಲಿ ನೀವೆಲ್ಲರೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆ ಮೂಲಕ ಸಮಾಜದಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ದನಿಎತ್ತಿ ಶ್ವೇಚ್ಚಾಚಾರ ತಡೆಗಟ್ಟುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ ಗಣರಾಜ್ಯದ 75 ನೇ ವರ್ಷದ ಸಂಭ್ರಮ ಆಚರಿಸುತ್ತಿರುವ ನಮ್ಮ ಭಾರತ ದೇಶ ಇಡೀ ಪ್ರಪಂಚದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಇಂತಹ ಪ್ರಜಾಪ್ರಭುತ್ವ ಬೇರೆ ಯಾವ ದೇಶದಲ್ಲೂ ಕಾಣಸಿಗುವುದಿಲ್ಲ. ಈ ಮೂಲಕ ನಾವುಗಳು ರಚನಾತ್ಮಕ, ಪ್ರಾಯೋಗಿಕ ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಇವುಗಳ ಸದ್ಬಳಕೆ ಮಾಡುವ ಜೊತೆಗೆ ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಆರ್.ಎಲ್ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಸ್ ಯತೀಶ್ ಮಾತನಾಡಿ, ಜಾಥಾ ಪರಿಕಲ್ಪನೆ ವಿದ್ಯಾರ್ಥಿಗಳದ್ದು, ಜವಾಬ್ದಾರಿಯುತ ಕಾನೂನು ವಿದ್ಯಾರ್ಥಿಯಾಗಿ ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಭಾರತ ವಿಶ್ವದಲ್ಲೇ ಅತಿ ಬಲಿಷ್ಠ ರಾಷ್ಟ್ರ ದೇಶದ ಎಲ್ಲರಿಗೂ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಜಾಥದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಟಿ.ವಿದ್ಯಾದರ ವೇದವರ್ಮ, ಟಿ.ಸಿ.ಪಂಕಜ, ಹೆಚ್. ಆರ್ ಪವನ್, ಬಿ.ಪಿ ಬಸವನಗೌಡ ಮತ್ತಿತರರಿದ್ದರು.ಈ ವೇಳೆ ಕಾಲೇಜಿನ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು 20 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ನಗರದಲ್ಲಿ ಸಂಚರಿಸಿದರು, ಆರ್.ಎಲ್. ಕಾನೂನು ಕಾಲೇಜು ರಸ್ತೆಯಿಂದ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಬಿಎಸ್‌ಎನ್‌ಎಲ್ ಕಚೇರಿ ವೃತ್ತ, ಹಳೆ ಪಿಬಿ ಮಾರ್ಗವಾಗಿ ದಾವಣಗೆರೆ ಮಹಾನಗರ ಪಾಲಿಕೆ ವೃತ್ತ, ಅಕ್ಕಮಹಾದೇವಿ ರಸ್ತೆ ಮಾರ್ಗವಾಗಿ ಆಗಮಿಸಿದ ಜಾಥಾ ನಂತರ ಆರ್.ಎಲ್. ಕಾನೂನು ಕಾಲೇಜು ಸಮಾಪನಗೊಂಡಿತು.