ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ದೇಶದ್ರೋಹ ಪ್ರಕರಣದಡಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದೆ.
ಯಾದಗಿರಿಯ ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮರೆಪ್ಪ ಚಟ್ಟೇರಕರ್, “ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಸಮಾಜದ ಸ್ವಾಸ್ಥ್ಯ ಕೆಡಿಸಿ, ಅರಾಜಕತೆ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ದೇಶಕ್ಕೆ ಸಂವಿಧಾನ ಕೊಟ್ಟ ಜ್ಞಾನಿಗೆ ಇಲ್ಲಿನ ಅಜ್ಞಾನಿಗಳು ಅವಮಾನ ಮಾಡಿದ್ದಾರೆ. ಘಟನೆಯ ಅಕ್ಷಮ್ಯವಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಅಪಮಾನ ಮಾಡಿರುವ ದುಷ್ಕರ್ಮಿಗಳನ್ನು ಗಡಿಪಾರು ಮಾಡಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಘಟನೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ದೇಶದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ರಾಜ್ಯದಲ್ಲಿರುವ ಎಲ್ಲ ಅಂಬೇಡ್ಕರ್ ಪ್ರತಿಮೆಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸರನ್ನು ನಿಯೋಜನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಪ್ರಭು ಬುಕ್ಕಲ್,ಭೀಮಾಶಂಕರ ಯರಗೋಳ,ಮಲ್ಲಪ್ಪ ಎಸ್.ಕೆ. ಚಾಮನಳ್ಳಿ,ಗೋಪಾಲ ತೆಳಗೇರಿ,ಸೈದಪ್ಪ ಕೂಲೂರು,ಲಾಲಪ್ಪ ತಲಾರಿ,ತಾಯಪ್ಪ ಭಂಡಾರಿ,ಮಾನಪ್ಪ ಕಟ್ಟಿಮನಿ,ಕಾಶಿನಾಥ ನಾಟೇಕಾರ,ರಾಹೊಲ್ ಕೊಲ್ಲೂರಕರ್,ಚಂದ್ರಕಾಂತ ಮುನಿಯಷ್ಟೂರ,ಪರಶುರಾಮ್ ಒಡೆಯರ್,ಮಲ್ಲಿನಾಥ ಸುಂಗಲಕರ್,ಹಣಮಂತ್ರಾಯ,ಮಲ್ಲಿಕಾರ್ಜುನ ಕುರಕುಂದಿ,ಮರುಳಸಿದ್ದ ನಾಯ್ಕಲ್, ಚಂದಪ್ಪ ಮುನಿಯಪ್ಪನೋರ,ನಿಂಗಣ್ಣ ಬೀರನಾಳ, ಸಂಪತ್ ಚಿನ್ನಾಕಾರ,ಮಾನಪ್ಪ ಎನ್. ಚಲುವಾದಿ, ಗೌತಮ ಅರಿಕೇರ, ಭೀಮಶಂಕರ್ ಈಟೇ, ಚಂದ್ರಕಾಂತ್ ಚಲವಾದಿ, ವಸಂತ, ಮಲ್ಲಪ್ಪ, ಶರಣಪ್ಪ,ಪ್ರೋ. ಮಾನುಗುರಿಕಾರ್, ಅಜೀಬ್ ಸಾಬ್ ಐಕೂರ್, ಮಲ್ಲಿಕಾರ್ಜುನ ಗುರುಸುಣಿಗಿ, ತಿಮ್ಮಣ್ಣ ರಾಯಚೂರಕರ್, ಬಸವರಾಜ್ ಗೋನಾಲ್ ಅರುಣುಕುಮಾರ್ ರಾಸನಕೇರಿ, ಸೈಬಣ್ಣ ನಟೇಕಾರ, ಸೈದಪ್ಪ ಕಣಜಿಕರ್, ಶಿವು ಖಾನಾಪುರ, ಭೀಮಣ್ಣ ಸುಂಗಲಕರ್, ಗ್ಯಾನಪ್ಪ ಬಿ. ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.