ಲೋಕಸಭಾ ಚುನಾವಣೆಗಳು ಕದ ಬಡಿದಿರುವ ಹೊತ್ತಿನಲ್ಲಿ ಎದುರಾದ ಈ ನಿತೀಶ್ ಅಸ್ತ್ರಕ್ಕೆ ಪ್ರತ್ಯಸ್ತ್ರದ ತಡಕಾಟದಲ್ಲಿದ್ದ ಬಿಜೆಪಿ ಇದೀಗ ಕರ್ಪೂರಿ ಅಸ್ತ್ರವನ್ನು ಹುಡುಕಿ ಹೊರತೆಗೆದು ಝಳಪಿಸಿದೆ. ಕ್ಷೌರಿಕ ಜಾತಿಗೆ ಸೇರಿದ್ದ ಅವರು ಹಿಂದುಳಿದ ವರ್ಗಗಳ ಪ್ರಭಾವೀ ನಾಯಕ. ಉತ್ತರಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದೊಡ್ಡ ಹೆಸರು
ಹೆಸರಾಂತ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಗೆ ಗೌರವ ತಂದುಕೊಡುವ ವ್ಯಕ್ತಿತ್ವ ಕರ್ಪೂರಿ ಅವರದು. ಆದರೆ ಈ ಪ್ರಶಸ್ತಿ ಕೊಡಲಾಗಿರುವ ಉದ್ದೇಶ ಅಪ್ಪಟ ರಾಜಕೀಯ ಲಾಭ ಪ್ರೇರಿತ.
ಬಿಹಾರದ ನಿತೀಶ್ ಕುಮಾರ್ ಸರ್ಕಾರ ತಾನು ಕೈಗೊಂಡಿದ್ದ ಜಾತಿಗಣತಿಯ ಫಲಿತಾಂಶಗಳನ್ನು ಇತ್ತೀಚೆಗೆ ಹೊರಹಾಕಿತ್ತು. ಈ ಅಂಕಿಅಂಶಗಳ ಪ್ರಕಾರ ಬಿಹಾರದಲ್ಲಿ ಅತಿ ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಅನುಕ್ರಮವಾಗಿ ಶೇ.36.1 ಮತ್ತು ಶೇ.27.1. ನಿತೀಶ್ ಕುಮಾರ್ ಅವರು ಈ ವರ್ಗಗಳ ಮೀಸಲಾತಿ ಪ್ರಮಾಣವನ್ನು ಈಗಾಗಲೇ ಶೇ.65ಕ್ಕೆ ಹೆಚ್ಚಿಸಿದ್ದಾರೆ.
ಲೋಕಸಭಾ ಚುನಾವಣೆಗಳು ಕದ ಬಡಿದಿರುವ ಹೊತ್ತಿನಲ್ಲಿ ಎದುರಾದ ಈ ನಿತೀಶ್ ಅಸ್ತ್ರಕ್ಕೆ ಪ್ರತ್ಯಸ್ತ್ರದ ತಡಕಾಟದಲ್ಲಿದ್ದ ಬಿಜೆಪಿ ಇದೀಗ ಕರ್ಪೂರಿ ಅಸ್ತ್ರವನ್ನು ಹುಡುಕಿ ಹೊರತೆಗೆದು ಝಳಪಿಸಿದೆ. ಕ್ಷೌರಿಕ ಜಾತಿಗೆ ಸೇರಿದ್ದ ಅವರು ಹಿಂದುಳಿದ ವರ್ಗಗಳ ಪ್ರಭಾವೀ ನಾಯಕ. ಉತ್ತರಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದೊಡ್ಡ ಹೆಸರು.
1978ರಲ್ಲಿ ಎರಡನೆಯ ಸಲ ಮುಖ್ಯಮಂತ್ರಿಯಾಗಿ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.26ರಷ್ಟು ಮೀಸಲಾತಿ ಒದಗಿಸುವ ಮುಂಗೇರಿಲಾಲ್ ಆಯೋಗದ ವರದಿಯ ಶಿಫಾರಸ್ಸನ್ನು ಜಾರಿಗೆ ತಂದಿದ್ದರು. ಈ ಕ್ರಮ ಜನತಾ ಪಾರ್ಟಿಯ ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿ ಅವರಿಗೆ ಸಮ್ಮತವಿರಲಿಲ್ಲ. ಜನತಾ ಪಾರ್ಟಿಯ ಅಂಗವಾಗಿದ್ದ ಜನಸಂಘಕ್ಕೂ ಒಪ್ಪಿಗೆ ಇರಲಿಲ್ಲ. ಬಿಹಾರ ಜನಸಂಘದ ಮುಂಚೂಣಿ ನಾಯಕ ಕೈಲಾಸಪತಿ ಮಿಶ್ರ ಠಾಕೂರ್ ಸಂಪುಟದ ಹಣಕಾಸು ಮಂತ್ರಿ. ಬಲಿಷ್ಠ ಜಾತಿಗಳು ಬಿಹಾರದಲ್ಲಿ ಭಾರೀ ಪ್ರತಿಭಟನೆಗಳನ್ನು ನಡೆಸುತ್ತವೆ. ಕರ್ಪೂರಿ ಅವರ ವಿರುದ್ಧ ಹೀನಾಮಾನ ಘೋಷಣೆಗಳನ್ನು ಕೂಗಿ ನಿಂದಿಸುತ್ತವೆ.
ಅಧಿಕಾರದಿಂದ ಕೆಳಗಿಳಿಸಿ ಕರ್ಪೂರಿ ರೆಕ್ಕೆಪುಕ್ಕಗಳನ್ನು ಕತ್ತರಿಸಲಾಗುತ್ತದೆ. ರಾಮಸುಂದರ ದಾಸ್ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಲಾಗುತ್ತದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಬಿ.ಪಿ. ಮಂಡಲ್ ನೇತೃತ್ವದ ಆಯೋಗ ರಚಿಸಲಾಗುತ್ತದೆ. ವಿ.ಪಿ.ಸಿಂಗ್ 1990ರಲ್ಲಿ ಮಂಡಲ ಆಯೋಗದ ವರದಿ ಜಾರಿ ಮಾಡುತ್ತಾರೆ. ಮೀಸಲಾತಿ ವಿರುದ್ಧ ಆಂದೋಲನಕ್ಕೆ ಇಂಬಾಗಿ ನಿಲ್ಲುತ್ತದೆ ಬಿಜೆಪಿ. ಮಂಡಲ್ ವಿರುದ್ಧ ಬಾಬ್ರಿ ಮಸೀದಿ ಕೆಡವಿ ಮಂದಿರ ನಿರ್ಮಿಸುವ ಕಮಂಡಲ ರಾಜಕಾರಣವನ್ನು ಭುಗಿಲೆಬ್ಬಿಸಿ ನಿಲ್ಲಿಸುತ್ತದೆ. ಎಲ್.ಕೆ.ಅಡ್ವಾಣಿ ಅವರು ದೇಶದ ಉದ್ದಗಲಕ್ಕೆ ರಾಮ ರಥಯಾತ್ರೆ ಕೈಗೊಳ್ಳುತ್ತಾರೆ. ಉತ್ತರ ಭಾರತದಲ್ಲಿ ‘ಮಂಡಲ್ ವರ್ಸಸ್ ಕಮಂಡಲ್’ ರಾಜಕಾರಣ ರಭಸ ಪಡೆಯುತ್ತದೆ. ಮಂಡಲ್ ಆಯೋಗದ ವರದಿ ಜಾರಿಯನ್ನು ವಿರೋಧಿಸಿದವರು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದ ಕರ್ಪೂರಿ ಠಾಕೂರ್ ಅವರನ್ನು ಮೆಚ್ಚಿಕೊಳ್ಳುವುದು ಅದೆಷ್ಟು ನೈಜ ಅಥವಾ ನಾಟಕೀಯ ಎಂಬ ಪ್ರಶ್ನೆ ಏಳುತ್ತದೆ.
1988ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರ ತಮಿಳುನಾಡಿನ ಜನಪ್ರಿಯ ನಟ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್. ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿದ್ದರು. 1989ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಗಳು ನಡೆಯಲಿದ್ದವು. ರಾಜೀವ್ ಉದ್ದೇಶ ಕೂಡ ಚುನಾವಣಾ ಲಾಭನಷ್ಟದ ಲೆಕ್ಕಾಚಾರವೇ ಆಗಿತ್ತು.
ಕೆದರಿದ ತಲೆಗೂದಲು, ದಪ್ಪಗಾಜಿನ ಕನ್ನಡಕ, ಸರಳ ಉಡುಗೆ ತೊಡುಗೆ, ಪರಮ ಪ್ರಾಮಾಣಿಕತೆ, ಸಾಮಾಜಿಕ ನ್ಯಾಯ ಕುರಿತು ಮನಸಿನಾಳದ ಕಳಕಳಿ ಹಾಗೂ ವಿನಮ್ರತೆ ಕರ್ಪೂರಿ ಅವರ ವ್ಯಕ್ತಿತ್ವದ ಹೆಗ್ಗುರುತುಗಳಾಗಿದ್ದವು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 26 ತಿಂಗಳ ಕಾಲ ಸೆರೆಯಲ್ಲಿದ್ದವರು. ಜಯಪ್ರಕಾಶ ನಾರಾಯಣ ಅವರ ಸಮೀಪವರ್ತಿ. ‘ಸಂಪೂರ್ಣಕ್ರಾಂತಿ’ ಆಂದೋಲನದ ಪಾಲುದಾರ. ಕುಖ್ಯಾತ ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಗಳಲ್ಲಿ ಬಿಹಾರದ ಮೊಟ್ಟಮೊದಲ ಕಾಂಗ್ರೆಸ್ಸೀತರ ಮುಖ್ಯಮಂತ್ರಿ ಆಗಿದ್ದರು. ಲಾಲೂಪ್ರಸಾ
ಬಿಹಾರದ ಸಮಷ್ಟೀಪುರ ಜಿಲ್ಲೆಯ ಪಿತೌಲಿಯಾ ಅವರ ಹುಟ್ಟೂರು. 1988ರಲ್ಲಿ ಅವರ ನಿಧನಾನಂತರ ಈ ಗ್ರಾಮಕ್ಕೆ ಕರ್ಪೂರಿ ಹೆಸರನ್ನೇ ಇಡಲಾಗಿದೆ. ಮಹಾತ್ಮಾ ಗಾಂಧೀಜಿಯಿಂದ ಪ್ರಭಾವಿತಗೊಂಡವರು. ಹಳ್ಳಿಯ ಕೆಲ ಕಾಲ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 1952ರಲ್ಲಿ ಸಮಾಜವಾದಿ ಪಾರ್ಟಿಯಿಂದ ಬಿಹಾರ ವಿಧಾನಸಭೆಗೆ ಚುನಾಯಿತರಾಗಿದ್ದರು. ಕಾಂಗ್ರೆಸ್ಸಿನಲ್ಲಿ ಎದ್ದಿದ್ದ ಆಂತರಿಕ ಬಿರುಗಾಳಿಯೇ ಕಾಂಗ್ರೆಸ್ಸೀತರ ಮುಖ್ಯಮಂತ್ರಿಯ ರೂಪದಲ್ಲಿ ಅವರನ್ನು ಮೇಲಕ್ಕೆ ತೇಲಿಸಿತ್ತು.
ಬಲಿಷ್ಠ ಜಾತಿಗಳನ್ನು ರಮಿಸುತ್ತಿದ್ದರೇ ವಿನಾ ಸವಾಲೆಸೆಯಲಿಲ್ಲ ಎಂಬುದು ಕರ್ಪೂರಿ ಕುರಿತ ಬಲಿಷ್ಠ ಜಾತಿಗಳ ಹೊಗಳಿಕೆ. ಸ್ವಗ್ರಾಮ ಪಿತೌಲಿಯಲ್ಲಿ ಬಲಿಷ್ಠ ಜಾತಿಯೊಂದಕ್ಕೆ ಸೇರಿದ ಮದುವೆ ಸಮಾರಂಭಕ್ಕೆ ಇವರನ್ನು ಆಹ್ವಾನಿಸಲಾಗಿತ್ತು. ತುದಿಯಲ್ಲಿ ಮಾವಿನ ಎಲೆಗಳನ್ನಿಟ್ಟು, ನೀರು ತುಂಬಿದ ಗಡಿಗೆಗಳನ್ನು ಹೊತ್ತು ನಿಲ್ಲಲು ನಾಪಿತರನ್ನು ಕರೆಯಲಾಗಿತ್ತು. ಇನ್ನೂ ಒಬ್ಬ ನಾಪಿತನ ಅಗತ್ಯವಿತ್ತು. ಈ ಕೊರತೆಯನ್ನು ತುಂಬಿಸುವಂತೆ ತಮ್ಮ ಮಗ ರಾಮನಾಥ ಠಾಕೂರ್ ಗೆ ಸೂಚನೆ ನೀಡಿದರು ಕರ್ಪೂರಿ ಠಾಕೂರ್. ಮಗ ಹಿಂಜರಿದಾಗ ತಾವೇ ಆ ಕೆಲಸಕ್ಕೆ ಮುಂದಾದರು. ಆ ಹೊತ್ತಿಗೆ ಇವರು ಒಮ್ಮೆ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕನ ಸ್ಥಾನಗಳೆರಡನ್ನೂ ನಿರ್ವಹಿಸಿದ್ದರು. ಕಡೆಗೆ ಗ್ರಾಮಸ್ಥರು ಮಧ್ಯಪ್ರವೇಶಿಸಿ ಮಗ ರಾಮನಾಥನನ್ನು ಒಪ್ಪಿಸಿದ ನಂತರ ತಂದೆ ಹಿಂದಕ್ಕೆ ಸರಿದರಂತೆ.
ಅಧಿಕಾರ ತೊರೆದ ನಂತರ ಗೋರಖಪುರ ವಿಶ್ವವಿದ್ಯಾಲಯದ ಸಭೆಯೊಂದರಲ್ಲಿ ಕರ್ಪೂರಿ ಭಾಗವಹಿಸಿರುತ್ತಾರೆ. ನೀವು ಭೂಸುಧಾರಣೆಗಳನ್ನು ಯಾಕೆ ಜಾರಿಗೆ ತರಲಿಲ್ಲ ಎಂಬ ಪ್ರಶ್ನೆಗೆ ಅವರು ನಿಮಿಷಕಾಲದ ಮೌನ ನಂತರ ಹೇಳುತ್ತಾರೆ- ‘ಭೂಸುಧಾರಣೆಗಳ ಜಾರಿಯನ್ನು ನನ್ನ ಸಚಿವ ಸಂಪುಟ ಒಪ್ಪಿಕೊಳ್ಳಲೇ ಇಲ್ಲ, ಒಂದು ವೇಳೆ ನಾನು ಹಠ ಹಿಡಿದಿದ್ದರೆ, ಸಂಪುಟ ಸಭೆಯಿಂದಾಚೆ ನಾನು ಜೀವಸಹಿತ ಹೊರಬರುವುದು ಸಾಧ್ಯವಿರಲಿಲ್ಲ’.
