ಅಲೆಮಾರಿ ಜನಾಂಗಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಅವರು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರ ಭರವಸೆ ಮೇರೆಗೆ ಸತ್ಯಾಗ್ರಹ ಅಂತ್ಯಗೊಳಿಸಿದರು.
ಬೀದರ್ ನಗರದ ನೌಬಾದ್ ಚೌಳಿ ಕಮಾನ್ ಹತ್ತಿರದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯಕ್ಕೆ ಮನೆ, ಶಿಕ್ಷಣ, ಆರೋಗ್ಯ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ವಂಚಿತರಾಗಿ ಬೀದಿ ಬದಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ಇವರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದು ಖಂಡಿಸಿ ಜ.23 ರಿಂದ ಜಿಲ್ಲಾಡಳಿತದ ವಿರುದ್ಧ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿ ಎದುರು ಉಪವಾಸ ಸತ್ಯಗ್ರಹ ನಡೆಸಿದರು.
ಮೂರನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಅಧಿಕಾರಿ ಸಿಂಧು ಎಚ್.ಎಸ್., ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸದಾಶಿವ ಬಡಿಗೇರ ಭೇಟಿ ನೀಡಿ ಅಲೆಮಾರಿ ಜನಾಂಗದವರೊಂದಿಗೆ ಕುಳಿತು ಸುದೀರ್ಘವಾಗಿ ಸಮಸ್ಯೆ ಆಲಿಸಿದರು.

“ಜಿಲ್ಲಾಡಳಿತಕ್ಕೆ ಅಲೆಮಾರಿ ಜನಾಂಗದವರಿಗೆ ನ್ಯಾಯ ಒದಗಿಸಿಕೊಡುವ ಜವಾಬ್ದಾರಿ ಇದೆ, ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನೇತ್ರತ್ವದಲ್ಲಿ ಅಲೆಮಾರಿಗಳ ಸಮೀಕ್ಷೆ ನಡೆಸಿ ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ತಾವು ಉಪವಾಸ ಸತ್ಯಾಗ್ರಹ ಕೈಬಿಡಬೇಕು” ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮನವೋಲಿಸಿದರು.
“ಮುಂದಿನ 3-4 ತಿಂಗಳಲ್ಲಿ ಅಲೆಮಾರಿ ಸಮುದಾಯದವರ ಸಮೀಕ್ಷೆ ನಡೆಸಿ ನ್ಯಾಯ ಒದಗಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಪೌರಾಡಳಿತ ಸಚಿವ ಮನೆ ಮುಂದೆ ಘೇರಾವ್ ಹಾಕುವ ಮೂಲಕ ಹೋರಾಟ ಮುಂದುವರೆಯುತ್ತದೆ” ಎಂದು ಓಂಪ್ರಕಾಶ ರೊಟ್ಟೆ ಎಚ್ಚರಿಸಿದರು. ಬಳಿಕ ಜಿಲ್ಲಾಧಿಕಾರಿಗಳು ತಂಪು ಪಾನೀಯ ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ತೆರೆ ಎಳೆದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್ ಪುತ್ಥಳಿಗೆ ಅಪಮಾನ, ದಲಿತ ವಿದ್ಯಾರ್ಥಿಗೆ ನಿಂದನೆ; ಭುಗಿಲೆದ್ದ ಆಕ್ರೋಶ
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ ಸೇರಿದಂತೆ ಅಲೆಮಾರಿ ಜನಾಂಗದ ಪ್ರಮುಖರು, ಮಹಿಳೆಯರು, ವೃದ್ಧರು, ಮಕ್ಕಳು ಇದ್ದರು.