ಪ್ರತಿಯೊಬ್ಬ ಪ್ರಜೆಯು ನಿರ್ಭೀತರಾಗಿ ಮತದಾನ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಮತ ಚಲಾವಣೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತಾರ ಜಿಲ್ಲಾಧಿಕಾರಿ ಡಾ. ಶಿವಶಂಕರ್ ಎನ್ ಹೇಳಿದರು.
ದೇವನಹಳ್ಳಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಜಿಲ್ಲೆಯ 18 ವರ್ಷ ಮೇಲ್ಪಟ್ಟ ಅರ್ಹ ಪ್ರಜೆಗಳು ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾಗುವ ಜತೆಗೆ ಪ್ರತಿ ಚುನಾವಣೆಯಲ್ಲಿ ಭಾಗಿಯಾಗಿ ಮತದಾನ ಮಾಡಬೇಕು” ಎಂದರು.
“2011ರ ಜನವರಿ 25 ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಈ ದಿನದ ಉದ್ದೇಶ ಮತದಾನ ಬಗ್ಗೆ ತಿಳುವಳಿಕೆ, ಜಾಗೃತಿ ನೀಡುವುದು. ಈ ಬಾರಿ ಯುವ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಮತದಾರರ ನೋಂದಣಿಗೆ ಮನವಿ ಮಾಡುವ ಕೆಲಸವಾಗಿದೆ” ಎಂದರು.
“ಯುವ ಮತದಾರರ ನೋಂದಾಯಿಸಲು ಗ್ರಾಮಪಂಚಾಯತಿ, ತಾಲೂಕು ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಕಾರ್ಯಕ್ರಮ ಮಾಡಲಾಗಿದೆ. ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿದೆ. ಮತದಾನವನ್ನು ನಿರ್ಭೀತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾವಣೆ ಮಾಡಬೇಕು. ಶತಾಯುಷಿಗಳು ಕೂಡ ಮತದಾನ ಮಾಡುವ ಉದಾಹರಣೆ ಇದೆ. ಇದರಿಂದ ಯುವಕರು ಸಹ ಉತ್ಸುಕರಾಗಿ ಮತದಾನದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲಾ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ” ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್ ಮಾತನಾಡಿ, “ಎಲ್ಲ ಪ್ರಜೆಗಳಿಗೆ ಮತದಾನ ಹಕ್ಕು ಮಾತ್ರವಲ್ಲ, ಅದು ಜವಾಬ್ದಾರಿ. ಜಿಲ್ಲೆಯಲ್ಲಿನ ಎಲ್ಲ ಪ್ರಜೆಗಳು ಕೂಡ ಮತದಾರರಾಗಿ ನೋಂದಣಿ ಮಾಡಬೇಕು. ಮತದಾನ ಮಾಡಬೇಕು. ಈ ವರ್ಷ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಂದು ಬಾರಿ ಒಂದೊಂದು ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಬಾರಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎಂಬ ಧ್ಯೇಯವಾಕ್ಯ ನೀಡಲಾಗಿದೆ” ಎಂದರು.
“ಸ್ವೀಪ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ 2019 ಲೋಕಸಭಾ ಚುನಾವಣೆಯಲ್ಲಿ ಶೇ.82 ರಷ್ಟು ಮತದಾನವಾಗಿತ್ತು. ಚುನಾವಣೆ ನಂತರ ಹೆಚ್ಚಿನ ಜಾಗೃತಿ ಮೂಲಕ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ.85 ರಷ್ಟು ಏರಿಕೆಯಾಗಿದೆ. ಈ ಬಾರಿ ಪ್ರಮಾಣ ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದರು.
“ಜಿಲ್ಲೆಯ ಸ್ವೀಪ್ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ನಗರದಲ್ಲಿ ಮತದಾನಕ್ಕೆ ಆಸಕ್ತಿ ಕಡಿಮೆ ಇದ್ದು ಬೇರೆ ಬೇರೆ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸ್ವೀಪ್ ಕೆಲಸಗಳನ್ನು ಮುಂದುವರೆಸಲಾಗುತ್ತದೆ. ಎಲ್ಲರೂ ಶೇ.100 ರಷ್ಟು ನೋಂದಾಯಿಸಲು ಹಾಗೂ ಮತದಾನ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ್, ಯೋಜನಾ ನಿರ್ದೇಶಕರಾದ ವಿಠಲ್ ಕಾವಳೆ, ಶಾಲ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.