ಭದ್ರಾ ಡ್ಯಾಮ್‌ನಿಂದ ನೆಲೆಗೆ ಹರಿಸುವ ನೀರು, ನಾಲೆಯ ಕೊನೆ ಭಾಗಕ್ಕೆ ತಲುಪುತ್ತಿಲ್ಲ ಎಂದು ಆರೋಪಿಸಿ ದಾವಣಗೆರೆ ಜಿಲ್ಲೆಯ ಬೆಳ್ಳಿಗನೂಡು ವಿತರಣೆ ನಾಲೆ ಬಳಿ ರೈತರು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಮಾತನಾಡಿ, “2ನೇ ನಾಲಾ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಕಂದಗಲ್, ಶಾಗಲೆ, ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ಕೊಳೇನಹಳ್ಳಿ, ನಾಗರಸನಹಳ್ಳಿ ಭಾಗಕ್ಕೆ ನೀರು ತಲುಪಿಲ್ಲ. ದಾವಣಗೆರೆ ಮತ್ತು ಮಲೆಬೆನ್ನೂರು ವಿಭಾಗಕ್ಕೆ ಹರಿಸಬೇಕಾದ ಪ್ರಮಾಣದಲ್ಲಿ ಮುಖ್ಯ ನಾಲೆಯಲ್ಲಿ 11 ಅಡಿ ಬರುವ ಬದಲು ಕೇವಲ 8 ಅಡಿ ನೀರು ಹರಿಯುತ್ತದೆ. ಇದರಿಂದ ನೀರಾವರಿ ಎಂಜಿನಿಯರ್‌ಗಳಿಗೆ ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ” ಎಂದರು.
“12 ದಿನ ನೀರು ಹರಿಸುವುದೆಂಬ ಐಸಿಸಿಯ ತೀರ್ಮಾನ ಅವೈಜ್ಞಾನಿಕವಾಗಿದೆ. ನಾಳೆ ನೀರು ಹರಿಸಿ, 12 ದಿನಗಳಾದವು. ಆದ್ದರಿಂದ ನೀರು ಹರಿಸುವುದನ್ನು ನಿಲ್ಲಿಸಬಾರದು. 20 ದಿನಗಳವರೆಗೆ ಮುಂದುವರೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಲೆಮಾರಿ ಜನಾಂಗಕ್ಕೆ ಮೂಲ ಸೌಕರ್ಯದ ಭರವಸೆ ; ಉಪವಾಸ ಸತ್ಯಾಗ್ರಹ ಅಂತ್ಯ
ಕರ್ನಾಟಕ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಎಕ್ಸಿಕ್ಯುಟೀವ್ ಎಂಜಿನಿಯರ್ ಆರ್ ಬಿ ಮಂಜುನಾಥ ಮಾತನಾಡಿ, “ಮುಖ್ಯ ನಾಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಮುಖ್ಯ ನಾಲೆಯಲ್ಲಿ 11 ಅಡಿ ನೀರು ಹರಿಸಬೇಕು. ಆದರೆ ಕೇವಲ 8 ಅಡಿ ನೀರು ಹರಿಯುತ್ತಿದೆ. 12 ದಿನ ನೀರು ಹರಿಸಬೇಕೆಂಬ ವೇಳಾಪಟ್ಟಿಯಂತೆ ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ” ಎಂದು ಅಸಮಾಧಾನಪಟ್ಟರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.