ಏ. 24ರಂದು ಗೋಕಾಕ್‌ನಲ್ಲಿ ನಡೆಯುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ವಿಜಯೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪಂಚಮಸಾಲಿ ಸಮುದಾಯ ಖಂಡನಾ ನಿರ್ಣಯ ತೆಗೆದುಕೊಳ್ಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ರಾಜ್ಯ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಬೆಳಗಾವಿ ಜಿಲ್ಲೆಯ ಒಳ ರಾಜಕಾರಣದ ಕಾವು ಜೋರಾಗಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಪಂಚಮಸಾಲಿ ಸಮುದಾಯ ಈಗ ಸಿಡಿದೆದ್ದಿದೆ.
ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಕಟ್ಟಿಹಾಕಲು ಕಾಂಗ್ರೆಸ್ ಈ ಬಾರಿ ಪಂಚಮಸಾಲಿ ನಾಯಕ ಮಹಾಂತೇಶ್ ಕಡಾಡಿ ಅವರನ್ನು ಮುಂದೆ ಬಿಟ್ಟಿದೆ. ಈ ನಡುವೆ ಪಂಚಮಸಾಲಿ ಮೀಸಲಾತಿ ಹೋರಾಟ ನೇತೃತ್ವ ವಹಿಸಿದ್ದ ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಪದೆ ಪದೇ ಗೋಕಾಕ್‌ಗೆ ಆಗಮಿಸುತ್ತಿರುವುದು ರಮೇಶ್ ಜಾರಕಿಹೊಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗೋಕಾಕ್ ಕ್ಷೇತ್ರದಲ್ಲಿ ಶ್ರೀಗಳ ಹೆಸರಿನಲ್ಲಿ ನಡೆಯುತ್ತಿರುವ ಗುರುವಂದನೆ ಮತ್ತು ಪಾದಪೂಜೆ ಕಾರ್ಯಕ್ರಮ ರಮೇಶ್ ಜಾರಕಿಹೊಳಿಯ ರಾಜಕೀಯ ತಂತ್ರಗಾರಿಕೆ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ.
ಏ. 24ರಂದು ಪಂಚಮಸಾಲಿ ಮತ್ತು ಎಲ್ಲ ಲಿಂಗಾಯತ ಒಳ ಪಂಗಡಗಳಿಗೆ 2D ಮೀಸಲಾತಿ ದೊರಕಿಸಿ, ಪ್ರಥಮ ಜಯ ತಂದು ಕೊಟ್ಟರೆಂಬ ಕಾರಣಕ್ಕೆ ಮೃತ್ಯುಂಜಯ ಸ್ವಾಮೀಜಿಯವರ ವಿಜಯೋತ್ಸವ, ಗುರುವಂದನಾ ಕಾರ್ಯಕ್ರಮ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಪಾದಪೂಜೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಸ್ವಾಮೀಜಿ ಸುತ್ತ ನಡೆಯುವ ಎಲ್ಲ ಬೆಳವಣಿಗೆಗಳು ಪಂಚಮಸಾಲಿ ನಾಯಕ ಮಹಾಂತೇಶ್ ಕಡಾಡಿ ಅವರಿಗೆ ವರವಾಗಿ ಪರಿಣಮಿಸಲಿವೆ ಎಂದು ಭಾವಿಸಿಕೊಂಡಿರುವ ರಮೇಶ್ ಜಾರಕಿಹೊಳಿ, `ಚುನಾವಣೆ ಹೊತ್ತಲ್ಲಿ ಯಾವುದೇ ಕಾರಣಕ್ಕೂ ಮೃತ್ಯುಂಜಯ ಸ್ವಾಮೀಜಿ ಅವರನ್ನು ಗೋಕಾಕ್ ಕ್ಷೇತ್ರಕ್ಕೆ ಬರದಂತೆ ತಡೆಹಿಡಿಯಿರಿ’ ಎಂದು ತಮ್ಮ ಬೆಂಬಲಿಗರಿಗೆ ಫರ್ಮಾನು ಹೊರಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಪ್ರಮುಖ ಬೆಳವಣಿಗೆಯೊಂದು ಗುರುವಾರ ಗೋಕಾಕ್ ನಗರದ ಹೊರವಲಯದಲ್ಲಿ ನಡೆದಿದೆ.
ಜಯ ಮೃತ್ಯುಂಜಯ ಸ್ವಾಮೀಜಿಯವರ ವಿಜಯೋತ್ಸವ ಆಯೋಜಿಸುವ ಬಗ್ಗೆ ಪಂಚಮಸಾಲಿ ಸಮುದಾಯದ ಮುಖಂಡರು ಗೋಕಾಕ್ ನಗರದ ಹೊರವಲಯದ ಬಸವೇಶ್ವರ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದರು. ಆ ಸಭೆಗೆ ಸಮುದಾಯದ ಎರಡು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು.
ಈ ಪೂರ್ವಭಾವಿ ಸಭೆಯಲ್ಲಿ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, `ಈ ಬಾರಿಯ ಚುನಾವಣೆಯಲ್ಲಿ ಅತೀ ಹೆಚ್ಚಿನ ಪಂಚಮಸಾಲಿ ಶಾಸಕರುಗಳು ಆಯ್ಕೆಯಾಗಬೇಕು. ವಿಧಾನಸಭೆಯಲ್ಲಿ ನಮ್ಮ ಪರವಾಗಿ ಹೋರಾಡಲು ಅನುಕೂಲ ಆಗುತ್ತದೆ’ ಎಂದು ಪಂಚಮಸಾಲಿ ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಆ ಸಭೆಯಲ್ಲಿ ಭಾಗಿಯಾಗಿದ್ದ ರಮೇಶ್ ಜಾರಕಿಹೊಳಿ ಬೆಂಬಲಿಗರು, ಸ್ವಾಮೀಜಿ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೃತ್ಯುಂಜಯ ಶ್ರೀಗಳತ್ತ ನುಗ್ಗಿಹೋಗಿದ್ದಾರೆ, ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್!
ಆ ಸಭೆಯಲ್ಲಿ ಭಾಗಿಯಾಗಿದ್ದ ಗೋಕಾಕ್ ಪಂಚಮಸಾಲಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಬಾಗೋಜಿ ಈ ದಿನ.ಕಾಮ್ ಜೊತೆ ಮಾತನಾಡಿ, “ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಬಹಿರಂಗವಾಗಿ ಹೇಳಬೇಡಿ. ಇದು ರಮೇಶ್ ಜಾರಕಿಹೊಳಿ ಕ್ಷೇತ್ರ. ಇಲ್ಲಿ ಅವರೇ ಗೆಲ್ಲಬೇಕು. ಚುನಾವಣಾ ರಾಜಕಾರಣ ಮಾಡಬೇಡಿ ಎಂದು ರಮೇಶ್ ಜಾರಕಿಹೊಳಿ ಆಪ್ತ ಮತ್ತು ಬಿಜೆಪಿ ಗೋಕಾಕ ಗ್ರಾಮೀಣ ಮಂಡಲ ಕಾರ್ಯದರ್ಶಿ ಬಾಳೇಶ್ ಗಿಡ್ನವರ್ ಸ್ವಾಮೀಜಿಗೆ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ” ಎಂದು ತಿಳಿಸಿದರು.
ಮುಂದುವರಿದು, “ಬಾಳೇಶ್ ಗಿಡ್ನವರ್ ಜೊತೆಗೆ ಹತ್ತು ಜನರ ಪುಂಡರ ಗುಂಪೊಂದು ಶ್ರೀಗಳ ಹತ್ತಿರ ಹೋಗಿ ಅವರನ್ನು ನಿಂದಿಸಿದೆ. ಈ ಹತ್ತು ಜನರಲ್ಲಿ ಲಿಂಗಾಯಿತರಲ್ಲದ ವ್ಯಕ್ತಿಗಳು ಹೋಗಿದ್ದಾರೆ ಎನ್ನುವುದು ಶ್ರೀಗಳ ಸುರಕ್ಷತೆಗೆ ಆತಂಕ ಒಡ್ಡಿದೆ. ಈ ಪುಂಡರೆಲ್ಲ ರಮೇಶ್ ಜಾರಕಿಹೊಳಿ ಬೆಂಬಲಿಗರು” ಎಂದು ನೇರವಾಗಿಯೇ ಪ್ರಕಾಶ್ ಬಾಗೋಜಿ ಆರೋಪಿಸಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಪಂಚಮಸಾಲಿ ಸಮುದಾಯದ ಜೆಡಿಎಸ್ ಮುಖಂಡರು ಮಧ್ಯ ಪ್ರವೇಶಿಸಿ, “ಸ್ವಾಮೀಜಿ ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ನೀವು ಪಂಚಮಸಾಲಿ ನಾಯಕರಾಗಿದ್ದೀರಿ. ರಮೇಶ್ ಜಾರಕಿಹೊಳಿ ಬದಲು ನೀವೇ ನಿಂತುಕೊಳ್ಳಿ. ಸ್ವಾಮೀಜಿ ನಿಮಗೂ ಆಶೀರ್ವಾದ ಮಾಡುತ್ತಾರೆ” ಎಂದು ಬಿಜೆಪಿಯ ಬಾಳೇಶ್ ಗಿಡ್ನವರ್‌ಗೆ ಸ್ಥಳದಲ್ಲೇ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ನಡೆಯುತ್ತಿರುವ ಇಂತ ಬೆಳವಣಿಗೆಯಿಂದ ಬೇಸತ್ತು, ಜಾರಕಿಹೊಳಿಗೆ ತಕ್ಕ ಉತ್ತರ ನೀಡಲು ಗೋಕಾಕ್ ಪಂಚಮಸಾಲಿ ಸಮುದಾಯದ ಮುಖಂಡರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ 75 ಸಾವಿರ ಲಿಂಗಾಯತ ಮತದಾರರಿದ್ದು, ಈ ಚುನಾವಣೆಯಲ್ಲಿ ಗೋಕಾಕ್‌ನ ಹಳ್ಳಿ ಹಳ್ಳಿ ಸುತ್ತಾಡಿ ಪಂಚಮಸಾಲಿ ಮತಗಳು ರಮೇಶ್ ಜಾರಕಿಹೊಳಿಗೆ ಹೋಗದಂತೆ ನೋಡಿಕೊಳ್ಳಲು ಸಮುದಾಯ ಕರೆಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಏ. 24ರಂದು ಗೋಕಾಕ್‌ನಲ್ಲಿ ನಡೆಯುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ವಿಜಯೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪಂಚಮಸಾಲಿ ಸಮುದಾಯ ಖಂಡನಾ ನಿರ್ಣಯ ತೆಗೆದುಕೊಳ್ಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಲಕ್ಷ್ಮಿ ಹೆಬ್ಬಾಳ್ಕರ್ ತಂತ್ರ ಗೆಲ್ಲುತ್ತಾ?
ಬೆಳಗಾವಿಯಲ್ಲಿ ರಮೇಶ್ ಜಾರಿಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ರಾಜಕೀಯ ತಿಕ್ಕಾಟಕ್ಕೆ ಈ ವಿಧಾನಸಭಾ ಚುನಾವಣೆ ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ. ಒಬ್ಬರನ್ನೊಬ್ಬರು ಸೋಲಿಸಲು ತಮ್ಮ ಆತ್ಮೀಯರನ್ನು ಅಭ್ಯರ್ಥಿಗಳನ್ನಾಗಿಸಿ, ಆಯಾ ಕ್ಷೇತ್ರದಲ್ಲಿ ಪರಸ್ಪರ ಇಬ್ಬರು ಚೆಕ್ ಮೇಟ್ ಇಟ್ಟಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಂತ್ರ ರೂಪಿಸಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ರಮೇಶ್ ಜಾರಕಿಹೊಳಿ ಸೋಲಿಸಲು ಗೋಕಾಕ್‌ನ ಪ್ರಸಿದ್ಧ ಮಕ್ಕಳ ವೈದ್ಯ ಪಂಚಮಸಾಲಿ ಸಮುದಾಯದ ನಾಯಕ ಮಹಾಂತೇಶ್ ಕಡಾಡಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.
ಗೋಕಾಕ್ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ಪರಿಶಿಷ್ಟರು, ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕ. 75 ಸಾವಿರ ಲಿಂಗಾಯತ ಮತದಾರರಿದ್ದರೆ, ಎಸ್ಟಿ 60 ಸಾವಿರ, ಮುಸ್ಲಿಂ 30 ಸಾವಿರ, ಉಪ್ಪಾರ 20 ಸಾವಿರ, ಎಸ್ಸಿ 20 ಸಾವಿರ, ಕುರುಬ 15 ಸಾವಿರ, ಮರಾಠರು 10 ಸಾವಿರ ಹಾಗೂ ಇತರೆ ಸಮುದಾಯಕ್ಕೆ ಸೇರಿದ 10 ಸಾವಿರ ಮತದಾರರು ಇದ್ದಾರೆ.
ಗೋಕಾಕ್‌ನಲ್ಲಿ ಜಾತಿ ರಾಜಕಾರಣವೇ ವಿಜೃಂಭಿಸಿದಲ್ಲಿ ಈ ಚುನಾವಣೆ ರಮೇಶ್ ಜಾರಕಿಹೊಳಿಗೆ ದುಬಾರಿಯಾಗಲಿದೆ. ಒಂದು ವೇಳೆ ಮತದಾರರು ಜಾತಿಗಿಂತ ವ್ಯಕ್ತಿ ವರ್ಚಸ್ಸಿಗೆ ಬೆಲೆ ಕೊಟ್ಟಿದ್ದೇ ಆದಲ್ಲಿ ರಮೇಶ್ ಜಾಕಿಹೊಳಿ ಹಾದಿ ಸುಗಮವಾಗಲಿದೆ ಎನ್ನುವುದು ಕ್ಷೇತ್ರಬಲ್ಲ ವಿಶ್ಲೇಷಕರ ಮಾತು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.