ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆ ನಮ್ಮೆಲ್ಲರ ಉಸಿರಾಗಬೇಕಿದೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಯುವಜನರ ಪಾಲು ಹೆಚ್ಚಾಗಿದೆ. ಯುವಜನಾಂಗ ತಮ್ಮ ಹೊಣೆಯನ್ನರಿತು ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣವಂತರಾಗಿ, ದುಡಿಮೆಯಲ್ಲಿ ನಿರತರಾಗಿ ಜಾತ್ಯತೀತ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸಂದೇಶ ನೀಡಿದರು.
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ನಮ್ಮ ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಸಿಖ್, ಜೈನರು ಸೇರಿದಂತೆ ಎಲ್ಲ ಧರ್ಮ, ಜಾತಿ ಜನಾಂಗದವರು ಸಹೋದರರಂತೆ ಬಾಳುತ್ತಿದ್ದೇವೆ” ಎಂದರು.
“ನಮ್ಮ ಸರ್ಕಾರ ರಚನೆಯಾದ ತಕ್ಷಣ ಜಾರಿಗೊಳಿಸಿದ ಮೊದಲನೆ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆಯಾಗಿರುತ್ತದೆ. ರಾಜ್ಯ ಸಾರಿಗೆ ನಿಗಮದ ಸಾರಿಗೆ ಬಸ್‌ಗಳಲ್ಲಿ ರಾಜ್ಯದ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಈ ಯೋಜನೆಯು 2023ರ ಜೂನ್ 11ರಿಂದ ಜಾರಿಗೆ ಬಂದಿದೆ. ದಾವಣಗೆರೆ ವಿಭಾಗದಲ್ಲಿ ಈವರೆಗೂ ಒಟ್ಟು 2,26,41,100 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಪ್ರಯಾಣ ವೆಚ್ಚವಾಗಿ ಸರ್ಕಾರ ₹61 ಕೋಟಿ 67 ಲಕ್ಷ ಮೊತ್ತವನ್ನು ನಿಗಮಕ್ಕೆ ನೀಡಿದೆ. ನಮ್ಮ ಸರ್ಕಾರ ಮತ್ತೆ 10 ಕೆ ಜಿ ಅಕ್ಕಿ ನೀಡಲು ತೀರ್ಮಾನಿಸಿ 5 ಕೆ ಜಿ ಅಕ್ಕಿ ಮತ್ತು 5 ಕೆ ಜಿ ಅಕ್ಕಿ ಬದಲಾಗಿ ₹170 ಹಣವನ್ನು ನೇರವಾಗಿ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ 3,34,00 ಬಿಪಿಎಲ್ ಪಡಿತರ ಚೀಟಿದಾರರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಅಲ್ಲದೇ 45,521 ಅಂತ್ಯೋದಯ ಪಡಿತರ ಚೀಟಿಗಳಿಗೆ ತಲಾ 35 ಕೆಜಿ ಆಹಾರಧಾನ್ಯ ವಿತರಿಸಲಾಗುತ್ತಿದೆ” ಎಂದರು.
“ಸರ್ಕಾರದ 3ನೇ ಮಹತ್ವದ ಗ್ಯಾರಂಟೆ ಯೋಜನೆಯಾದ ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯುನಿಟ್‌ಗಳ ವರೆಗಿನ ಬಳಕೆಯ ಮಿತಿಯಲ್ಲಿ ಶೂನ್ಯ ವಿದ್ಯುತ್ ಬಿಲ್ ಒದಗಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 4,81,870 ಬೆಸ್ಕಾಂ ಗ್ರಾಹಕರಿದ್ದು, ಇದರಲ್ಲಿ ಗೃಹಜ್ಯೋತಿ ಯೋಜನೆಯಡಿ 4,24,057 ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ 3,38,867 ಕುಟುಂಬದ ಯಜಮಾನಿಯರ ಖಾತೆಗೆ ನೇರವಾಗಿ ಪ್ರತಿ ತಿಂಗಳು ₹2,000ದಂತೆ ಈವರೆಗೆ ₹279 ಕೋಟಿ ಜಮೆ ಮಾಡಲಾಗಿದೆ” ಎಂದು ತಿಳಿಸಿದರು.
“ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಪದವೀಧರ ಯುವಕ-ಯುವತಿಯರಿಗೆ ₹3,000 ಹಾಗೂ ಡಿಪ್ಲೊಮಾದಾರರಿಗೆ ₹1,500ರಂತೆ ಮಾಸಿಕವಾಗಿ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಜನವರಿ 12ರಿಂದ ಈ ಯೋಜನೆಗೆ ಚಾಲನೆ ನೀಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಈವೆರಗೆ 3,616 ಮಂದಿ ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದಾರೆ” ಎಂದು ತಿಳಿಸಿದರು.
“ದಾವಣಗೆರೆ ಜಿಲ್ಲೆಯ ವಾಡಿಕೆ ಮಳೆ 659 ಮಿಮೀ ಬದಲಿಗೆ ಈ ವರ್ಷ 470 ಮಿಮೀ ಸರಾಸರಿ ಮಳೆಯಾಗಿರುತ್ತದೆ. ಇದರಿಂದ ಮುಂಗಾರು, ಹಿಂಗಾರಿನಲ್ಲಿ ತೀವ್ರ ಮಳೆ ಕೊರತೆಯಾಗಿರುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಬರಪರಿಹಾರ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ, ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
“ಮಳೆ ಕೊರತೆಯಿಂದ ಜಿಲ್ಲೆಯಲ್ಲಿ 1,50,621 ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಬೆಳೆಸಮೀಕ್ಷೆ ಹಾಗೂ 4,81,321 ಪ್ಲಾಟ್‌ಗಳಲ್ಲಿ ಪೂಟ್ಸ್ ತಂತ್ರಾಂಶದ ಮೂಲಕ 4,13,888 ಪ್ಲಾಟ್‌ಗಳನ್ನು ನೋಂದಾಯಿಸಿ ಜಿಲ್ಲೆಯಲ್ಲಿ ಈವರೆಗೆ 74,188 ರೈತರಿಗೆ ಮೊದಲ ಹಂತವಾಗಿ ₹2,000ದಂತೆ ₹14.21 ಕೋಟಿ ಬರಪರಿಹಾರದ ಹಣ ಪಾವತಿಸಲಾಗಿದೆ. ತುರ್ತು ಬರ ಕಾಮಗಾರಿಗಳಿಗಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ₹18.78 ಕೋಟಿ ಅನುದಾನ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳಿಗಾಗಿ ಯಾವುದೇ ಅನುದಾನದ ಕೊರತೆ ಇರುವುದಿಲ್ಲ” ಎಂದರು.
“ಚನ್ನಗಿರಿ ತಾಲೂಕಿನ ಆಲೂರು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡದೆ ಸಮಸ್ಯೆಯಾಗಿದ್ದ ಇ-ಸ್ವತ್ತು ವಿತರಣೆ ಕ್ರಮ ಮತ್ತು ದಾವಣಗೆರೆ ತಾಲೂಕು ಮಾಳಗೊಂಡನಹಳ್ಳಿಯಲ್ಲಿ ಅಮೃತನಗರ ಕಂದಾಯ ಗ್ರಾಮ ಮಾಡಿ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಿದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ವರ್ಷ ಜಿಲ್ಲೆಗೆ ₹195.39 ಕೋಟಿ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಿ ಈವರೆಗೆ ಒಟ್ಟು ₹27.35 ಲಕ್ಷ ಮಾನವದಿನ ಸೃಜನೆ ಮಾಡಿ ₹114.16 ಕೋಟಿ ವೆಚ್ಚ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಮನರೇಗಾ ಯೋಜನೆಯಡಿ 125 ಅಮೃತ ಸರೋವರ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಮುಂಗಾರು ಮಳೆ ಕೊರತೆಯಾದರೂ ಮುಂದಿನ 44 ವಾರಗಳಿಗಾಗುವಷ್ಟು ಮೇವಿನ ಲಭ್ಯತೆ ಇದೆ. 4,694 ಮಂದಿ ರೈತರಿಗೆ ಮೇವು ಬೆಳೆಯಲು ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ” ಎಂದರು.
“ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ ನಗರದ 50 ವಲಯಗಳಲ್ಲಿ ನೀರು
ಸರಬರಾಜು ಮಾಡುವ ಕಾಮಗಾರಿಗಳು ಕೆಲವು ಇನ್ನೂ ಪ್ರಗತಿಯಲ್ಲಿದ್ದು, ಮಾರ್ಚ್ ವೇಳೆಗೆ ಪಾಲಿಕೆಯ ಎಲ್ಲ ಬಡಾವಣೆಗಳಿಗೆ ವಾರದ 24 ಗಂಟೆಯೂ(24/7) ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಸಂವಿಧಾನದ ಸದಾಶಯಗಳನ್ನು ಜನಸಾಮಾನ್ಯರಿಗೂ ತಲುಪಿಸಬೇಕೆನ್ನುವ ಮಹದುದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂದಿನಿಂದ ಫೆಬ್ರವರಿ 23ರವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳು ಮತ್ತು 7 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಜಾಥಾ ಸಂಚರಿಸಲಿದೆ. ಗ್ರಾಮಗಳಿಗೆ ಜಾಥಾ ಬಂದಾಗ ಸಾರ್ವಜನಿಕರು ಭಾಗಿಯಾಗುವ ಮೂಲಕ ಸಂವಿಧಾನದ ಮೌಲ್ಯಗಳನ್ನು ತಿಳಿದುಕೊಂಡು ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ಈ ವೇಳೆ ವಿವಿಧ ಇಲಾಖೆಗಳು ಹಾಗೂ ಶಾಲೆಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್, ಎಸ್‌ಪಿ ಉಮಾ ಪ್ರಶಾಂತ್, ಸಿಇಒ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್, ಆಯುಕ್ತೆ ರೇಣುಕಾ, ಎಸಿ ದುರ್ಗಾಶ್ರೀ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.