- ನ್ಯಾಯಮೂರ್ತಿ ಕೆ ನಟರಾಜನ್ ಪೀಠದಿಂದ ಅರ್ಜಿ ವಿಚಾರಣೆ
- ಏ.17ಕ್ಕೆ ಮುಂದೂಡಿ ಆದೇಶ ಹೊರಡಿಸಿದ ನ್ಯಾಯಾಧೀಶರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆ ಆಗಿರುವ ಅರ್ಜಿ ವಿಚಾರಣೆಯ ವಾದ ಮಂಡನೆ ವಿಚಾರದ ವೇಳೆ ನ್ಯಾಯಮೂರ್ತಿಗಳು ಮತ್ತು ಸಿಬಿಐ ವಕೀಲರ ನಡುವೆ ಬಿರುಸಿನ ವಾಗ್ವಾದ ನಡೆದಿದೆ.
ರಾಜ್ಯ ಅಭಿಯೋಜಕರ ಮನವಿ ಮೇರೆಗೆ ಡಿಕೆಶಿ ಪ್ರಕರಣವನ್ನು ನಿಗದಿತ ಸಮಯಕ್ಕೆ ಬದಲಾಗಿ ಮುಂಚಿತವಾಗಿ ಆಲಿಸಲು ನ್ಯಾಯಮೂರ್ತಿ ಕೆ ನಟರಾಜನ್ ಅವರು ಕೈಗೆತ್ತಿಕೊಂಡರು.
ಈ ವೇಳೆ ಸಿಬಿಐ ಪರ ವಾದ ಮಂಡಿಸುತ್ತಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು ಬೇರೊಂದು ಪೀಠದಲ್ಲಿ ವಾದ ಮಂಡನೆ ಮಾಡುತ್ತಿದ್ದರು. ಈ ವಿಷಯವನ್ನು ಸಹೋದ್ಯೋಗಿಗಳು ನ್ಯಾಯಾಧೀಶರ ಗಮನಕ್ಕೆ ತಂದ ಮತ್ತೊಮ್ಮೆ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅವರ ಮಾತಿಗೆ ಒಪ್ಪಿದ ನ್ಯಾಯಾಧೀಶರು ಕೆಲ ಕಾಲ ಕಾಲಾವಕಾಶ ನೀಡಿದರು. ಕೆಲ ಹೊತ್ತಿನ ನಂತರ, ಮತ್ತೆ ವಿಚಾರಣೆ ಆರಂಭಿಸಿದಾಗಲೂ ಪ್ರಸನ್ನಕುಮಾರ್ ಅವರು ಬೇರೊಂದು ಪ್ರಕರಣದ ವಿಚಾರಣೆಯಲ್ಲಿ ಇದ್ದರು.
ನ್ಯಾಯಾಲಯವು ಈ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತು ಡಿ ಕೆ ಶಿವಕುಮಾರ್ ಪರ ಹಾಜರಾಗಿದ್ದ ಹಿರಿಯ ವಕೀಲರ ವಾದ ಆಲಿಸಿ, ಪ್ರಕರಣದ ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ಆದೇಶ ನೀಡಿತು.
ಈ ಸುದ್ದಿ ತಿಳಿಯುತ್ತಿದ್ದಂತೆ ನ್ಯಾ. ನಟರಾಜನ್ ಪೀಠದ ಮುಂದೆ ಹಾಜರಾದ ಪ್ರಸನ್ನಕುಮಾರ್ ಸಿಬಿಐ ಪರ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? : ಮುರುಘಾಶ್ರೀ ಪ್ರಕರಣ | ಆರೋಪಿ ಶಿವಮೂರ್ತಿ ಶರಣರ ಮೇಲೆ ದೋಷಾರೋಪ ನಿಗದಿ
ಇದಕ್ಕೆ ಕೋಪಗೊಂಡ ನ್ಯಾ. ನಟರಾಜನ್ ನಿಮಗಾಗಿ 2 ಸಲ ವಿಚಾರಣೆ ಮುಂದೂಡಲಾಗಿದೆ. ಈಗ ಮತ್ತೆ ವಾದ ಮಂಡನೆಗೆ ಕಾಲಾವಕಾಶ ಕೇಳುತ್ತಿದ್ದೀರಲ್ಲಾ? ನಿಮಗೆ ಬೇಕೆಂದಾಗ ಬಂದು ವಾದ ಮಾಡುತ್ತೇನೆ ಎನ್ನಲು ಇದನ್ನು ಏನೆಂದುಕೊಂಡಿದ್ದೀರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪ್ರಸನ್ನಕುಮಾರ್ ‘ಬೇರೊಂದು ಪೀಠದಲ್ಲಿ ವಾದ ಮಂಡನೆ ಇತ್ತು. ಹಾಗಾಗಿ ನಿಮ್ಮ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲ. ಹಾಗಾಗಿ ನನ್ನ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು ನೀವು ಹೇಳಬೇಕೆಂದುಕೊಂಡಿರುವುದನ್ನು ಲಿಖಿತವಾಗಿ ಸಲ್ಲಿಸಿ ಎಂದರು.
ಇದಕ್ಕೆ ಮರು ಉತ್ತರಿಸಿದ ಪ್ರಸನ್ನಕುಮಾರ್ ವಾದ ಆಲಿಸಲು ತಾವು ಸಿದ್ಧವಿಲ್ಲ ಎಂಬ ವಿಚಾರವನ್ನು ನೀವು ಕೂಡ ಆದೇಶದಲ್ಲಿ ದಾಖಲಿಸಬೇಕು ಎಂದು ಪಟ್ಟುಹಿಡಿದರು.
ಇವರಿಬ್ಬರ ಹಗಜಗ್ಗಾಟ ಕೆಲಕಾಲ ಹಾಗೆ ಮುಂದುವರೆಯಿತು. ಕೊನೆಗೆ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ವಿಸ್ತರಿಸಿದ್ದಲ್ಲದೇ, ಸಿಬಿಐ ಪರ ವಕೀಲರ ವಾದ ಆಲಿಸಲು ಏಪ್ರಿಲ್ 17ಕ್ಕೆ ಮುಂದೂಡಿದರು.