ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಮಸೀದಿಯೊಂದಕ್ಕೆ ನುಗ್ಗಿದ್ದ ಭಿನ್ನಕೋಮಿನ ಯುವಕನೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತನನ್ನು ಹನುಮಂತ ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಕಾವೂರಿನಲ್ಲಿರುವ ಮಸೀದಿಯೊಳಗೆ ಬಂದು ಕೂತು, ಆಕ್ಷೇಪಾರ್ಹ ಪದಗಳನ್ನು ಉಲ್ಲೇಖಿಸಿದ್ದಕ್ಕಾಗಿ ಈತನನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
“ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮರಕಡ ಗ್ರಾಮದ ಮಿಲ್ಲತ್ ನಗರ ಮಸೀದಿಗೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಒಳ ಪ್ರವೇಶಿಸಿದ್ದಾನೆ. ಈ ವೇಳೆ ಮಸೀದಿಯಲ್ಲಿದ್ದರು ಆತನ ವಿಡಿಯೋವನ್ನು ಮಾಡಿಕೊಂಡಿದ್ದಾರೆ. ಕುಡಿದ ಸ್ಥಿತಿಯಲ್ಲಿದ್ದ ಯುವಕ, ಅಸಭ್ಯವಾಗಿ ಮಾತನಾಡಿದ್ದಾನೆ. ಆಕ್ಷೇಪಾರ್ಹ ಪದಗಳನ್ನು ಉಲ್ಲೇಖಿಸಿದ್ದಾರೆ ಎಂದು ಮಸೀದಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ, ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ” ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ವಿಜಯನಗರ | ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ತುಂಡುಡುಗೆಗೆ ನಿಷೇಧ; ಭಕ್ತಿ ಭಾವ ಮೂಡಿಸಲು ಈ ಕ್ರಮ ಎಂದ ಜಿಲ್ಲಾಧಿಕಾರಿ!
ಬಂಧಿತ ಯುವಕ ಹನುಮಂತ, ಮೂಲತಃ ಬಾಗಲಕೋಟೆಯವರಾಗಿದ್ದು, ಕೂಲಿ ಕೆಲಸಕ್ಕೆಂದು 20 ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಅಸಭ್ಯ ವರ್ತನೆಯ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 447(ಅತಿಕ್ರಮ ಪ್ರವೇಶ), 295(ಧಾರ್ಮಿಕ ಭಾವನೆ ಅಪವಿತ್ರ), 295(A-ಧಾರ್ಮಿಕ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.