ಜನವರಿ 28ರಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಪೀಠದ ಬಳಿ ರಾಜ್ಯ ಮಟ್ಟದ ಶೋಷಿತರ ಜಾಗೃತಿ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಯ ಸಚಿವರುಗಳು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ನಗರದಲ್ಲಿ ವಾಹನಗಳ ದಟ್ಟಣೆಯನ್ನು ತಪ್ಪಿಸಲು ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಜ.28ರ ಬೆಳಗ್ಗೆ 06ರಿಂದ ಸಂಜೆ 06 ಗಂಟೆಯವರೆಗೆ ಚಿತ್ರದುರ್ಗ ನಗರಕ್ಕೆ ಆಗಮಿಸುವ ಭಾರಿ ಹಾಗೂ ಲಘು ವಾಹನಗಳ ಸಂಚಾರದ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಆದೇಶ ಹೊರಡಿಸಿದ್ದಾರೆ.
ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ವಾಹನಗಳಲ್ಲಿ ಆಗಮಿಸುವ ನಿರೀಕ್ಷೆಯಿದ್ದು, ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಕೆಲವು ಸಂಚಾರ ಮಾರ್ಗದ ಬದಲಾವಣೆ ಮಾಡಲಾಗಿದೆ.
ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು, ಹೊಸ ಎನ್.ಎಚ್-48 (ಬೈಪಾಸ್) ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ -13 ರ ಮೂಲಕ ಬಂದು ಮದಕರಿಪುರ ಗ್ರಾಮದ ಬಳಿಯ ಸರ್ವಿಸ್ ರಸ್ತೆಯ ಮೂಲಕ ಇಳಿದು ಚಳ್ಳಕೆರೆ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸಬೇಕು.
ಹೊಸಪೇಟೆ ಮಾರ್ಗದಿಂದ (ಎನ್.ಎಚ್-50) ಮೂಲಕ ಬರುವ ಪ್ರಯಾಣಿಕರ ವಾಹನಗಳು, ಎನ್.ಎಚ್-48ರ ಬೈಪಾಸ್ ರಸ್ತೆ ಮುಖಾಂತರ ಮದಕರಿಪುರ ಗ್ರಾಮದ ಬಳಿಯ ರಸ್ತೆಯ ಮೂಲಕ ಇಳಿದು ಚಳ್ಳಕೆರೆ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸಬೇಕು.
ಶಿವಮೊಗ್ಗ ಹಾಗೂ ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು, ಕಣಿವೆ ಕ್ರಾಸ್ ಮುಖಾಂತರ ನಗರಕ್ಕೆ ಪ್ರವೇಶಿಸಬೇಕು. ಶಿವಮೊಗ್ಗ ಕಡೆಯಿಂದ ಚನ್ನಗಿರಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಸಂಚರಿಸುವ ಸರಕು ಸಾಗಣೆಯ ಭಾರಿ ವಾಹನಗಳು ಚನ್ನಗಿರಿ ಪಟ್ಟಣದಿಂದ ಸಂತೆಬೆನ್ನೂರು ಕ್ರಾಸ್ ಮುಖಾಂತರ ಸಂಚರಿಸಿ, ಸಂತೆಬೆನ್ನೂರು ಮಾರ್ಗವಾಗಿ ಎನ್.ಎಚ್-48ರಸ್ತೆ ಮುಖಾಂತರ ಸಂಚರಿಸಬೇಕು.
ಮುರುಘರಾಜೇಂದ್ರ ಬೃಹನ್ಮಠದ ಮುಂಭಾಗದಿಂದ ಸೀಬಾರ ಅಂಡರ್ಪಾಸ್‌ವರೆಗಿನ ಎನ್.ಎಚ್-48ರಸ್ತೆಯಲ್ಲಿ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.