ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ, ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯನವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಬಸವಣ್ಣನವರ ಮೂರ್ತಿ ಹಾಗೂ ವಚನಗಳ ಪುಸ್ತಕ ನೀಡಿ ಗೌರವಿಸಿದರು.
ಬಳಿಕ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ತಾವು ಬಸವಣ್ಣವರ ಅನುಯಾಯಿಗಳಾಗಿ ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಆದೇಶ ಹೊರಡಿಸಿರುವುದು. ಬಸವಕಲ್ಯಾಣ ಅನುಭವ ಮಂಟಪ ಕಟ್ಟಡ ನೀಲಿ ನಕಾಶೆ ತಮ್ಮ ಅವಧಿಯಲ್ಲಿ ಪೂರ್ಣಗೊಂಡಿದೆ” ಎಂದು ಸ್ಮರಿಸಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡಬೇಕೆನ್ನುವ ಬಹುದಿನಗಳ ಬೇಡಿಕೆ ಈಡೇರಿಸಿದ ಸಿಎಂ ಹಾಗೂ ಸಚಿವ ಸಂಪುಟದ ಎಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿ, ಮುಂದೆ ಆಗಬಹುದಾದ ಬಸವಣ್ಣನವರ ಕಾರ್ಯಗಳ ಕುರಿತು ಸಿಎಂ ಸಿದ್ದರಾಮಯ್ಯನವರ ಜತೆ ಚರ್ಚಿಸಿದರು.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕ | ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಘೋಷಣೆ
ಈ ಸಂದರ್ಭದಲ್ಲಿ ಇಳಕಲ್ ಶ್ರೀ, ನಿಜಗುಣಾನಂದ ಸ್ವಾಮೀಜಿ, ಸಿದ್ದಯ್ಯನ ಕೋಟೆ ಶ್ರೀ, ಕೂಡಲ ಸಂಗಮದ ಬಸವಯೋಗಿ ಶ್ರೀ, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ
ಪಟ್ಟದ್ದೇವರು, ಪತ್ರಕರ್ತ ಸಿದ್ದಪ್ಪ ಮೂಲಗೆ ಸೇರಿದಂತೆ ಸಾಹಿತಿಗಳು, ಚಿಂತಕರು ಇದ್ದರು.