ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಉಂಟಾಗುತ್ತಿರುವ ವಾಹನ ಸಂಚಾರ ದಟ್ಟಣೆ ವಿಶ್ವ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ನಿತ್ಯ ಪೀಕ್ ಅವರ್‌ನಲ್ಲಿ ಜನರು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಕಳೆಯುವಂತಾಗಿದೆ. ಇತ್ತೀಚೆಗೆ ಟ್ರಾಫೀಕ್‌ನಲ್ಲಿ ಸಿಲುಕಿ ಮಹಿಳೆಯೊಬ್ಬರು ಕಾರಿನಲ್ಲಿಯೇ ಕುಳಿತು ಬಟಾಣಿ ಸುಲಿದ ಘಟನೆ ಸುದ್ದಿಯಾಗಿತ್ತು. ಇಂತಹ ಹಲವಾರು ಘಟನೆಗಳು ನಮ್ಮ ಮುಂದಿವೆ. ಇದೀಗ, ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆ ಮಾಡೋದಕ್ಕೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಉಪಾಯದೊಂದಿಗೆ ಮುಂದೆ ಬಂದಿದ್ದಾರೆ.
ಇನ್ನುಮುಂದೆ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಡ್ರೋನ್ ಹಾರಾಟ ನಡೆಯಲಿದೆ. ಹೌದು, ನಗರದ ಪ್ರಮುಖ ಜಂಕ್ಷನ್ ಅಥವಾ ಹೆಚ್ಚು ವಾಹನ ಸಂಚಾರ ದಟ್ಣಣೆ ಇರುವ ರಸ್ತೆಗಳಲ್ಲಿ ಟ್ರಾಫಿಕ್ ಕ್ಲಿಯರ್ ಮಾಡೋದಕ್ಕೆ ಬೆಂಗಳೂರು ಸಂಚಾರ ಪೊಲೀಸರು ಡ್ರೋನ್ ಬಳಕೆಗೆ ಮುಂದಾಗಿದ್ದಾರೆ.
ಟ್ರಾಫಿಕ್ ನಿವಾರಣೆಗೆ ಡ್ರೋನ್ ಹೇಗೆ ಬಳಕೆಯಾಗಲಿದೆ?
ಸದ್ಯ ತಂತ್ರಜ್ಞಾನ ಮುಂದುವರೆದಿದೆ. ಒಂದಿಲ್ಲೊಂದು ವಿಚಾರದಲ್ಲಿ ತಂತ್ರಜ್ಞಾನದ ಬಳಕೆ ಉತ್ತಮ ಮಾರ್ಗವಾಗಿದೆ. ರಸ್ತೆ ಸಂಚಾರ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಗರಗಳಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಈ ಡ್ರೋನ್ ವಿಚಾರವಾಗಿ ಈ ಹಿಂದೆ ಗೃಹ ಮಂತ್ರಿ ಡಾ. ಜಿ ಪರಮೇಶ್ವರ್ ಅವರು ಮಾಹಿತಿ ನೀಡಿದ್ದರು.
ರಾಜಧಾನಿಯಲ್ಲಿ ಸದ್ಯಕ್ಕೀಗ ಟೋಯಿಂಗ್ ನಿಷೇಧಿಸಲಾಗಿದೆ. ಹಾಗಾಗಿ, ಜನರು ಎಲ್ಲೇಂದರಲ್ಲಿ ವಾಹನ ನಿಲುಗಡೆ ಮಾಡುವುದು. ನೋ ಪಾರ್ಕಿಂಗ್ ಕಡೆಗೆ ವಾಹನ ಹಾಕಿ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಬೆಂಗಳೂರಿನ ಮಾರ್ಕೆಟ್ ರಸ್ತೆಗಳು, ಮುಖ್ಯ ಜಂಕ್ಷನ್ ಸಂಪರ್ಕಿಸುವ ರಸ್ತೆಗಳು, ಸಣ್ಣ ಸಣ್ಣ ರಸ್ತೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಿದೆ.
ಇನ್ನು ಜಂಕ್ಷನ್‌ಗಳಲ್ಲಿ ನಿಯೋಜಿಸಲಾದ ಪೊಲೀಸರು ಹೆಚ್ಚುವರಿ ದಟ್ಟಣೆ ವೀಕ್ಷಣೆ ಮಾಡೋದಕ್ಕೆ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಟ್ರಾಫಿಕ್ ಎಲ್ಲಿಯವರೆಗೆ ಇದೆ ಎಂದು ತಿಳಿದುಕೊಳ್ಳಲು ಹಾಗೂ ಟ್ರಾಫಿಕ್ ಯಾವ ಕಾರಣಕ್ಕೆ ಆಗಿದೆ? ಎಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಒಳ್ಳೆಯದು ಎಂದು ತಿಳಿದುಕೊಂಡು ಸರಳ ಸಂಚಾರಕ್ಕೆ ಅನುವು ಮಾಡಿಕೊಡಲು ಡ್ರೋನ್‌ಗಳು ಸಹಾಯಕವಾಗಲಿದೆ. ಕೆಲವೊಮ್ಮೆ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡರೆ ಮೂಮೆಂಟ್ ನೋಡಿ ಕ್ಲಿಯರ್ ಮಾಡಲು ಸಹಾಯವಾಗಲಿದೆ. ಇದರಿಂದ ಪೀಕ್ ಅವರ್‌ನಲ್ಲಿ ಸಂಚಾರ ದಟ್ಟಣೆ ಸರಿಪಡಿಸಬಹುದು. ಇದರಿಂದ ಪೊಲೀಸರಿಗೆ ಸಾಕಷ್ಟು ಸಹಕಾರ ಆಗಲಿದೆ.
ಜತೆಗೆ, ಈ ಡ್ರೋನ್ ಕ್ಯಾಮರಾಗಳನ್ನು ನಗರದಲ್ಲಿನ ಭದ್ರತಾ ವಿಚಾರಕ್ಕೂ ಸಹ ಬಳಕೆ ಮಾಡಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗುತ್ತಿದೆ. ಜನನಿಬಿಡ ಸ್ಥಳಗಳಲ್ಲಿ ಈ ಡ್ರೋನ್ ಬಳಕೆ ಮಾಡುವುದರಿಂದ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂಬುದು ಪೊಲೀಸರ ಅಭಿಪ್ರಾಯ. ಈ ಬಗ್ಗೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಸ್ಪಷ್ಟನೆ ನೀಡಿದ್ದಾರೆ.
ಈ ಡ್ರೋನ್ ಕ್ಯಾಮೆರಾಗಳು ಆ ಪ್ರದೇಶದ ರಸ್ತೆಯಲ್ಲಿ ಎಲ್ಲಿ ಹೆಚ್ಚು ದಟ್ಟಣೆಯಿದೆ. ಯಾವ ಸ್ಥಳದಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಸೆರೆಹಿಡಿಯಲಿವೆ. ಈ ದೃಶ್ಯಗಳ ನೇರ ವೀಕ್ಷಣೆಯನ್ನು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಗಮನಿಸಲಾಗುತ್ತದೆ. ಈ ಮೂಲಕ ಜಂಕ್ಷನ್‌ಗಳಲ್ಲಿರುವ ಸಿಬ್ಬಂದಿಗೆ ಮಾಹಿತಿ ರವಾನೆಯಾಗಲಿದೆ. ತಕ್ಷಣ ಸಿಬ್ಬಂದಿ ಸಮಸ್ಯೆ ಉಂಟಾಗಿರುವ ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಲು ನೆರವಾಗಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತರ ಜಗಳದ ಮಧ್ಯ ಹೋದ ವ್ಯಕ್ತಿ ಕೊಲೆ
ಯಾವ ಜಂಕ್ಷನ್‌ಗಳಲ್ಲಿ ಡ್ರೋನ್ ಹಾರಾಟ?
ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್‌ಗಳು ಹಾರಾಡಲಿವೆ. ಮೆಜೆಸ್ಟಿಕ್, ಎಂಜಿ ರೋಡ್, ರಾಜಭವನ, ಚಾಲುಕ್ಯ ಸರ್ಕಲ್, ತುಮಕೂರು ರಸ್ತೆ, ಹೆಬ್ಬಾಳ, ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ಜಂಕ್ಷನ್‌ಗಳಲ್ಲಿ ಡ್ರೋನ್ ಹಾರಾಡಲಿದೆ.
ಅತಿ ಹೆಚ್ಚು ಟ್ರಾಫಿಕ್ ಇರುವ ಕಡೆಗಳೆಲ್ಲೆಲ್ಲಾ ಡ್ರೋನ್‌ಗಳ ಬಳಕೆ ಮಾಡಿಕೊಳ್ಳಲಾಗುತ್ತದೆ. ಡ್ರೋನ್‌ಗಳ ಮೂಲಕ ಪರಿಶೀಲನೆ ನಡೆಸಿ ಕೂಡಲೇ ಸಂಚಾರ ಕ್ಲಿಯರ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್‌ಗಳು ಹಾರಾಡುತ್ತಿವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಡ್ರೋನ್‌ಗಳು ಹಾರಾಡಲಿವೆ.