ಬ್ರಿಟಿಷರ ನಿಶ್ಶಸ್ತ್ರೀಕರಣ ಕಾನೂನು ವಿರೋಧಿಸಿ ಬಂಡಾಯ ಹೂಡಿದ ಹಲಗಲಿ ಬೇಡರ ಕುರಿತ ವೀರಗಾಥೆಯನ್ನು ಕುರ್ತಕೋಟಿ ಕಲ್ಮೇಶ ಲಾವಣಿ ರೂಪದಲ್ಲಿ ಬರೆದದ್ದನ್ನು ಮೂಲ ಆಧಾರವಾಗಿ ಇಟ್ಟುಕೊಂಡು ಪ್ರತಿಭಾವಂತ ರಂಗ ನಿರ್ದೇಶಕ ಮಹದೇವ ಹಡಪದ ಅವರು ವೇದಿಕೆಯ ಮೇಲೆ ಆತ್ಮಗೌರವದ ಇತಿಹಾಸವನ್ನೇ ಸೃಷ್ಟಿಸಿದ್ದಾರೆ ಎಂದು ಶರಣ ಸಾಹಿತಿ ರಂಜಾನ್ ದರ್ಗಾ ಹೇಳಿದರು.
ಧಾರವಾಡ ನಗರದ ರಂಗಾಯಣ ಕಲ್ಯಾಣಮಂಟಪದಲ್ಲಿ ಜನವರಿ 27ರಂದು ಕಲಾವಿದ ಮಹದೇವ ಹಡಪದ ನಿರ್ದೇಶನದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹಲಗಲಿ ಬೇಡರ ದಂಗೆಯಾದಾರಿತ ‘ಹತಾರ’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಂಸ್ಥಾನಿಕರು ಹೇಡಿಗಳಾಗಿ ಆ ಕಾಯ್ದೆಯನ್ನು ಶಿರಸಾವಹಿಸಿ ಪಾಲಿಸಿದರು. ಆದರೆ ಸ್ವಾಭಿಮಾನವೇ ಮೈವೆತ್ತ ಹಲಗಲಿ ಬೇಡರು ತಮ್ಮ ಉತ್ಪಾದನಾ ಉಪಕರಣಗಳಾದ ಬಿಲ್ಲು ಬಾಣ ಮುಂತಾದವುಗಳನ್ನು ಕೊಡದೆ ಸೂರ್ಯ ಮುಳುಗದ ಸಾಮ್ರಾಜ್ಯದವರು ಎನಿಸಿಕೊಂಡ ಬ್ರಿಟಿಷರನ್ನು ಎದುರಿಸಿ ಹುತಾತ್ಮರಾದರು. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇಂಥ ಘಟನೆ ಇನ್ನೊಂದಿಲ್ಲ” ಎಂದು ತಿಳಿಸಿದರು.
“ಹಲಗಲಿ ಗ್ರಾಮ ʼವೀರಗ್ರಾಮʼವೆಂದು ರಾಷ್ಟ್ರೀಯ ಸ್ಮಾರಕವಾಗಬೇಕು. ʼಹಲಗಲಿ ವೀರʼ ಪ್ರಶಸ್ತಿ ಕೊಡಬೇಕು. ಹಲಗಲಿ ಸ್ವಾಭಿಮಾನದ ಸಂಕೇತವಾಗಬೇಕು. ಸ್ವಾಭಿಮಾನದ ಸಂಕೇತವಾಗಿರುವ “ಭೀಮಾ ಕೋರೆಗಾಂವ ವಿಜಯಸ್ತಂಭ”ದಂತೆ ನೆಲದ ಅಸ್ಮಿತೆಗಾಗಿ ಹೋರಾಡಿದ ಹಲಗಲಿ ಬೇಡರ ದಂಗೆಯ ಸ್ಮಾರಕವೊಂದು ನಿರ್ಮಾಣವಾಗಬೇಕಿದೆ. ಧಾರವಾಡದವರಿಗೆ ಇಂಥ ಹೃದಯಸ್ಪರ್ಶಿ ವೀರೋಚಿತ ನಾಟಕ ನೋಡುವಂಥ ಅವಕಾಶ ಕಲ್ಪಿಸಿದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರೂ ಅಭಿನಂದನಾರ್ಹರು” ಎಂದರು.
“ರಾಘವ ಕಮ್ಮಾರರ ಸಂಗೀತ ಒಂದೂವರೆ ಘಂಟೆಯ ನಾಟಕದುದ್ದಕ್ಕೂ ನೋಡುಗರ ಮನಸ್ಸನ್ನು ಹಿಡಿದಿಡುತ್ತದೆ. ಯೋಗೇಶ್ ಬಗಲಿಯವರ ಬೆಳಕು ವಿನ್ಯಾಸ ಸಮರ್ಪಕವಾಗಿದೆ. ವಿವಿಧ ಜಿಲ್ಲೆಗಳಿಂದ ಬಂದ ಶಿಬಿರಾರ್ಥಿಗಳಾದ ವೀರೇಶ ಪುಟಾಣಿ, ಸಂತೋಷ ಕುರುಬರ, ಮಂಜುನಾಥ ಮಂಡಲಗೇರಿ, ಚಂದ್ರಶೇಖರ ಕಿಲ್ಲೇದಾರ, ಅಕ್ಕಮ್ಮ ದೇವರಮನಿ, ಕುಶಾಲಕುಮಾರ ಸಾಲಿಮಠ, ಗಣೇಶ ರವಿ ನಾಯ್ಕ, ರಾಜೇಶ್ ಎಂ, ಮಂಜುನಾಥ ಮ್ಯಾಗೇರಿ, ಪ್ರಸನ್ನ ಕುಂದ್ರಾಳ, ಮಂಜುನಾಥ ಸಜ್ಜನರ, ಅಶ್ವಿನಿ, ವಾದ್ಯಗಾರ ಗಜೇಂದ್ರಗಡ ಅವರ ಪ್ರತಿಭಾನ್ವಿತ ಶ್ರಮ ಸಾರ್ಥಕವಾಗಿದೆ” ಎಂದರು.
“ಈ ನಾಟಕದ ಕುರಿತು ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ತಮ್ಮ ಮುಖಪುಸ್ತಕದಲ್ಲಿ “ಕೋರೆಗಾಂವ ವಿಜಯಸ್ತಂಭ” ಉಲ್ಲೇಖವಾದಾಗ ಬಾಬಾಸಾಹೇಬರು ನೆನಪಾದರು. ಅಂದು ಅವರು ಇತಿಹಾಸದ ಕಾಲಗರ್ಭದಲ್ಲಡಗಿದ್ದ ಪುಣೆಯ ಹತ್ತಿರದ ಭೀಮಾ ತೀರದ “ಕೋರೆಗಾಂವ ವಿಜಯಸ್ತಂಭ”ವನ್ನು ಅವರು ಹೊರಗೆ ತಂದಿರದಿದ್ದರೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಂತಹ ನೆನಪನ್ನು ತಂದ ಇಂದಿನ ನಾಟಕ ಪ್ರಯೋಗಾತ್ಮಕವಾಗಿ ಖುಷಿ ನೀಡಿತು” ಎಂದು ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅನ್ನಭಾಗ್ಯ ಅಕ್ಕಿ ಕಳವು; ಬಿಜೆಪಿ ಮುಖಂಡನ ಸಹೋದರ ಬಂಧನ
“ಇತಿಹಾಸದ ಘಟನೆಯೊಂದನ್ನು ರಂಗದಲ್ಲಿ ಪ್ರಸ್ತುತ ಪಡಿಸಬೇಕಾದರೆ ಪ್ರೇಕ್ಷಕರನ್ನು ಮಾನಸಿಕವಾಗಿ ಆಗಿನ ಕಾಲಕ್ಕೆ ಕೊಂಡೊಯ್ಯುತ್ತಲೇ ರಂಗಸ್ಥಳದಲ್ಲಿ ಘಟನಾವಳಿಗಳು ದೃಶ್ಯಗಳ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಇಂತಹ ತಂತ್ರವನ್ನು ಸರಳವಾಗಿ, ಸುಂದರವಾಗಿ, ಸಂಗೀತ-ಬೆಳಕಿನ ಉತ್ತಮ ನಿರ್ವಹಣೆಯೊಂದಿಗೆ ನಾಟಕದ ನಿರ್ದೇಶಕ ಮಹಾದೇವ ಹಡಪದ ಪ್ರೇಕ್ಷಕರ ಮನಗೆದ್ದಿರುವರು. ಮೋಸದ ಬ್ರಿಟಿಷ್ ಕಂಪನಿ ಆಡಳಿತದಲ್ಲಿ ಹಲಗಲಿ ಬೇಡರ ಅಸ್ತಿತ್ವದ ನಡುವೆಯೂ ಅರಳುವ ಪ್ರೇಮಕಥಾನಕವು ಮನಕ್ಕೆ ಕಚಗುಳಿಯಿಡುತ್ತದೆ. ಇಂಥಹ ಹಲವಾರು ಝಲಕ್‌ಗಳಿರುವ ಈ ನಾಟಕದ ಮುಂದಿನ ಪ್ರದರ್ಶನಗಳಿಗೆ ಶುಭವಾಗಲಿ” ಎಂದು ಹಾರೈಸಿದ್ದಾರೆ.