ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಬೆಂಗಳೂರು ಮತ್ತು ವಿಜಯಪುರ ಮಾರ್ಗದಲ್ಲಿ ಮೊದಲ ಬಾರಿಗೆ ‘ಕಲ್ಯಾಣ ರಥ’ ಹೆಸರಿನ ಐಷಾರಾಮಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ.
ಈ ಐಷಾರಾಮಿ ಬಸ್ ಸೇವೆಗೆ ಇತ್ತೀಚೆಗಷ್ಟೇ ಸಿಂಧನೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದರು. ಸಿಂಧನೂರು, ಗಂಗಾವತಿ, ಹೊಸಪೇಟೆ ಮೂಲಕ ಬೆಂಗಳೂರಿಗೆ ಆರಾಮದಾಯಕ ಪ್ರಯಾಣಕ್ಕೆ ₹1,250 ಪ್ರಯಾಣ ದರವನ್ನು ನಿಗದಿಪಡಿಸಲಾಗಿತ್ತು. ಇದೀಗ, ‘ಕಲ್ಯಾಣ ರಥ’ ಐಷರಾಮಿ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಸೇವೆಯನ್ನು ಕೆಕೆಆರ್‌ಟಿಸಿಯ ವಿಜಯಪುರ ವಿಭಾಗ ಆರಂಭಿಸಿದೆ. ಪ್ರಯಾಣಿಕರಿಂದ ಈ ಬಸ್‌ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್ ವೇಳಾಪಟ್ಟಿ
ವಿಜಯಪುರ-ಬೆಂಗಳೂರು ನಡುವಿನ ‘ಕಲ್ಯಾಣ ರಥ’ ಐಷರಾಮಿ ಬಸ್ ರಾತ್ರಿ 9.45ಕ್ಕೆ ವಿಜಯಪುರದಿಂದ ಹೊರಡಲಿದೆ. ಬೆಂಗಳೂರು ನಗರವನ್ನು ಬೆಳಗ್ಗೆ 6.45ಕ್ಕೆ ತಲುಪಲಿದೆ. ಬೆಂಗಳೂರು ನಗರದಿಂದ ರಾತ್ರಿ 10 ಗಂಟೆಗೆ ಹೊರಡಲಿದೆ. ವಿಜಯಪುರಕ್ಕೆ ಬೆಳಗ್ಗೆ 7 ಗಂಟೆಗೆ ತಲುಪಲಿದೆ. ಈ ಬಸ್‌ಗೆ ಪ್ರಯಾಣ ದರವನ್ನು ₹1,417 ನಿಗದಿ ಮಾಡಲಾಗಿದೆ. ಕೆಎಸ್ಆರ್‌ಟಿಸಿ ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಳೆನೀರು ಮರುಬಳಕೆಗಾಗಿ ಇಂಗುಗುಂಡಿ ನಿರ್ಮಾಣಕ್ಕೆ ಮುಂದಾದ ಬಿಬಿಎಂಪಿ
ಬಸ್‌ನಲ್ಲಿ ಏನೇನಿದೆ?
ಕಲ್ಯಾಣ ರಥ ಬ್ಯಾಂಡ್‌ನ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಕ್ಲಾಸ್ ಬಸ್ 40 ಆಸನಗಳು, ಬಿಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಬಸ್‌ನಲ್ಲಿ ಇದೆ.
‘ಕಲ್ಯಾಣ ರಥ’ ವೋಲ್ವೋ ಬಸ್ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪರಿಚಯಿಸಿದ ಐಷಾರಾಮಿ ಬಸ್ ಸೇವೆಯಾಗಿದೆ. ಸಿಂಧನೂರು-ಬೆಂಗಳೂರು ಸೇರಿದಂತೆ ನಾನಾ ಮಾರ್ಗದಲ್ಲಿ ಈ ಮಾರ್ಗದ ಬಸ್ ಈಗಾಗಲೇ ಸಂಚಾರ ನಡೆಸುತ್ತಿವೆ.