ಕರ್ನಾಟಕ ರಾಜ್ಯದ ಏಕೈಕ ಚಿನ್ನದ ಗಣಿ ಇರುವ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಉರ್ದು ಮಾಧ್ಯಮದ ಪ್ರೌಢಶಾಲೆ ಇಲ್ಲದೆ ನೂರಾರು ಮಕ್ಕಳು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುವಂತಾಗಿದೆ.
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರೂ ಸಮರ್ಪಕವಾಗಿ ಅನುಷ್ಠಾನಗೊಳಿಸದೆ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ದೊರೆಯುತ್ತಿಲ್ಲ.
ಗುರುಗುಂಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಇದ್ದು ನೂರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 8ನೇ ತರಗತಿ ವರೆಗೆ ಮಾತ್ರ ಇದ್ದು, 9ರಿಂದ 10ನೇ ತರಗತಿಗೆ ಅಭ್ಯಾಸ ಮಾಡಲು ಲಿಂಗಸೂಗೂರು ತಾಲೂಕಿಗೆ ಹೋಗಬೇಕಿದೆ. ಗುರುಗುಂಟಾ ಗ್ರಾಮದಿಂದ 20 ಕಿಮೀ ಪ್ರಯಾಣ ಬೆಳೆಸಿ ಹೋಗಬೇಕಿದೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದೇ ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕು. ಇದರಿಂದ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಈ ಗ್ರಾಮದಲ್ಲಿ ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರೇ ಹೆಚ್ಚಾಗಿದ್ದು, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕಾಗಿದೆ. ಆದರೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಮಾಧ್ಯಮಿಕ ಶಿಕ್ಷಣವೂ ಗಗನಕುಸುಮವಾಗಿದೆ.
ಆರ್‌ಟಿಇ ಕಾಯ್ದೆ 2009ರ ಪ್ರಕಾರ ಪ್ರತಿ ಐದು ಕಿಲೋಮೀಟರ್ ಒಳಗಡೆ ಒಂದು ಪ್ರೌಢಶಾಲೆಯನ್ನು ತೆರೆಯಬೇಕು. ಆದರೆ ಸರಿ ಸುಮಾರು 8 ವರ್ಷಗಳಾದರೂ ಉನ್ನತೀಕರಿಸಿದ ಶಾಲೆಯನ್ನು ಪ್ರೌಢ ಶಾಲೆಯಾಗಿ ಉನ್ನತೀಕರಿಸಿಲ್ಲ.
ಪಾಲಕರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಐತಿಹಾಸಿವಾಗಿ ಪ್ರಸಿದ್ಧಿ ಪಡೆದ ಹಾಗೂ ಚಿನ್ನದ ಗಣಿಯಿರುವ ತಾಲೂಕಿನಲ್ಲಿಯೇ ಇಂತಹ ಗ್ರಾಮದಲ್ಲಿ ಸರ್ಕಾರ ಪ್ರೌಢಶಾಲೆ ಮಂಜೂರು ಮಾಡದೆ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮುಖಂಡ ಗುಲಾಮ್ ಹಫೀಜ್ ಸಾಬ್ ಈ ದಿನ.ಕಾಮ್ ಜತೆ ಮಾತನಾಡಿ, “ಗುರುಗುಂಟ ಗ್ರಾಮವು ಸುತ್ತಮುತ್ತಲಿನ 40 ಗ್ರಾಮಗಳಿಗೆ ಕೇಂದ್ರ ಬಿಂದು. ಇಲ್ಲಿ ಸುಮಾರು 15,000 ಜನಸಂಖ್ಯೆ ಇದೆ. ಉರ್ದು ಶಾಲೆಯಲ್ಲಿ 09ನೇ ತರಗತಿಗೆ ಓದುವುದಕ್ಕೆ ಲಿಂಗಸೂಗೂರು ತಾಲೂಕಿಗೆ ಹೋಗಬೇಕು. ಲಿಂಗಸೂಗೂರಿಗೆ ಹೋಗಿ ಬರಲು ಮಕ್ಕಳು ಹೈರಾಣಾಗುತ್ತಾರೆ. ಸರಿಯಾದ ಸಮಯಕ್ಕೆ ಹೋಗಲು ಆಗದೇ ಅನೇಕರು ಶಿಕ್ಷಣ ಬಿಟ್ಟಿದ್ದಾರೆ. ಬಸ್‌ಗಳಲ್ಲಿ ಸೀಟು ಸಿಗದೆ ಕೆಲವೊಮ್ಮೆ ಚಾಲಕರು ನಿಲ್ಲಿಸದೆ ಹೋಗುತ್ತಾರೆ. ಗ್ರಾಮದಲ್ಲಿಯೇ ಪ್ರೌಢಶಾಲೆ ತೆರೆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು” ಎಂದು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭಾರತೀಯರಿಗೆ ಗೌರವದ ಬದುಕು ನೀಡಿದ ಗ್ರಂಥ ಸಂವಿಧಾನ: ಶಾಕು ಬೋಧಿಧಮ್ಮ
ಶಾಲೆಯ ಶಿಕ್ಷಕ ಮೊಹಮ್ಮದ್ ಅಜೀಮ್ ಬಿಸ್ತಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲೆಯಲ್ಲಿ 6 ರಿಂದ 8ನೇ ತರಗತಿಯವರೆಗೆ 75 ವಿದ್ಯಾರ್ಥಿಗಳು ಹಾಗೂ 8ನೇ ತರಗತಿಯಲ್ಲಿ 26 ವಿದ್ಯಾರ್ಥಿಗಳಿದ್ದು, ಪಕ್ಕದ ಕೋಠಾ ಗ್ರಾಮದ 8ನೇ ತರಗತಿಯಲ್ಲಿ ಸುಮಾರು 20 ಮಕ್ಕಳಿದ್ದಾರೆ. ಗುರುಗುಂಟಾ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಒಂದು ವೇಳೆ ಪ್ರೌಢಶಾಲೆಯನ್ನು ನಮ್ಮ ಗ್ರಾಮದಲ್ಲಿ ಪ್ರಾರಂಭಿಸಿದ್ದಲ್ಲಿ ಗುರುಗುಂಟಾ ಗ್ರಾಮದ ಮಕ್ಕಳ ಜೊತೆಗೆ ಕೋಠಾ ಗ್ರಾಮದ ಮಕ್ಕಳಿಗೂ ಲಾಭವಾಗುತ್ತದೆ. ಇದರಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಜತೆಗೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಾಯವಾಗುತ್ತದೆ” ಎಂದು ಮನವಿ ಮಾಡಿದರು.
ಇದನ್ನು ನೋಡಿದಾಗ ನಮಗೆ ಆಘಾತವಾಯಿತು ಇಷ್ಟೊಂದು ವಿದ್ಯಾರ್ಥಿಗಳು ಇರುವಾಗಲೂ ಪ್ರೌಢಶಾಲೆವನ್ನು ನೀಡುತ್ತಿಲ್ಲ ಎಂದರೆ ನಿಜವಾಗಲೂ ನಾಚಿಗೇಡಿಯ ಸಂಗತಿ ಎಮ್ಎಲ್ಎ ವಜ್ನ್ ಮಾನಪ್ಪ ಬಿಯೂರಿಗೆ ಹೇಳಿದರೆ ಫೋನಿನ ಮುಖಾಂತರ ಆದಷ್ಟು ಬೇಗ ಅಲ್ಲಿ ಪ್ರೌಢಶಾಲೆಯನ್ನು ಒಂಬತ್ತು ಹತ್ತನೇ ತರಗತಿ ಪ್ರಾರಂಭಿಸಿಕೊಡಿ ಅಂತ ಆದರೂ ಇನ್ನೂ ಅನುಮತಿ ಕೋರ ಕೊಟ್ಟಿಲ್ಲ ಇದು ಬಹಳ ಬೇಸರವಾಗುತ್ತದೆ ಹಿಂತಾ ಬೇಜವಾಬ್ದಾರಿ ಬಿ ಆಫೀಸರ್ ನಮ್ಮ ತಾಲೂಕಿನಲ್ಲಿ ಒಳಗಿದ್ದಾರೆ