ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ

Date:

Advertisements
ಜನ ಕರುಣಿಸಿದ ಅಧಿಕಾರವನ್ನು ಜನರಿಗಾಗಿ ಬಳಸದೇ ಹೋದರೆ, ಬಿಹಾರದ ಬೆಳವಣಿಗೆ ಪಾಠವಾಗದೇ ಹೋದರೆ, ಕರ್ನಾಟಕವೂ ಕಮಲದ ಕೈವಶವಾಗಬಹುದು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ, ರಾಮ ನೆಲೆ ನಿಂತರೂ ಸಂಘಿಗಳ ನಾಟಕ ನಿಲ್ಲುವುದಿಲ್ಲ. ಈ ನಾಟಕದ ನಿರ್ದೇಶಕನ ಅಧಿಕಾರದಾಹವನ್ನು ಜನ ಅರ್ಥ ಮಾಡಿಕೊಳ್ಳದಿದ್ದರೆ, ದೇಶಕ್ಕೂ ಉಳಿಗಾಲವಿಲ್ಲ.

ಜನವರಿ 28ರ ಭಾನುವಾರ, ದೇಶದ ರಾಜಕೀಯ ರಂಗ ಕ್ಷಿಪ್ರ ಕಾರ್ಯಾಚರಣೆಗಳಿಗೆ ಸಾಕ್ಷಿಯಾಯಿತು. ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಬೆಳಗ್ಗೆ ರಾಜೀನಾಮೆ ನೀಡಿ, ಸಂಜೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಮೂಲಕ ನಾಟಕೀಯ ಬೆಳವಣಿಗೆಯ ಕೇಂದ್ರಬಿಂದುವಾದರು. ನಿತೀಶ್ ನಾಟಕದ ಪ್ರಮುಖ ಪಾತ್ರಧಾರಿಯಾಗಿದ್ದರೂ, ತೆರೆಯ ಹಿಂದಿನ ನಿರ್ದೇಶಕರು ಬೇರೆಯೇ ಇದ್ದಾರೆ. ಅವರು ಆಡಿಸಿದಂತೆ ನಿತೀಶ್ ಆಡುತ್ತಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಲು ನಿತೀಶ್ ಒಬ್ಬರನ್ನೇ ಅಲ್ಲ, ದೇಶವನ್ನೇ ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿದ್ದಾರೆ.

ಸುಮಾರು ಮೂವತ್ತು ವರ್ಷಗಳ ಕಾಲ ಕೇವಲ ಒಂದು ಮಂದಿರ ನಿರ್ಮಾಣಕ್ಕಾಗಿ, ಒಂದು ಪುಟ್ಟ ಮೂರ್ತಿ ಪ್ರತಿಷ್ಠಾಪನೆಗಾಗಿ ದೇಶದಲ್ಲಿ ನಡೆಯಬಾರದ ನಾಟಕಗಳೆಲ್ಲ ನಡೆದುಹೋದವು. ಧರ್ಮ ದರ್ಮಗಳ ನಡುವೆ ದ್ವೇಷಾಸೂಯೆಗಳನ್ನು ಬಿತ್ತಿ ಬೆಳೆಯಲಾಯಿತು. ಸಾವಿರಾರು ಜನ ಬಲಿಯಾಗಬೇಕಾಯಿತು. ಸನಾತನಿಗಳು ಮತ್ತು ಸಂಘಪರಿವಾರದವರ ಬಯಕೆಯಂತೆ ಬಾಲರಾಮನ ಪ್ರತಿಷ್ಠಾಪನೆಯೂ ಆಯಿತು. ಇನ್ನುಮೇಲಾದರೂ ದೇಶ ಶಾಂತಿ, ಸಹಬಾಳ್ವೆಯತ್ತ ಮರಳಬಹುದೆಂದು ಭಾವಿಸಿದ್ದವರು, ಭ್ರಮನಿರಸನಗೊಳ್ಳುವಂತೆ ಬಿಹಾರದ ಬೆಳವಣಿಗೆಯ ಮೂಲಕ ಆಟ ಮುಂದುವರೆದಿದೆ.

ಈ ಆಟ ಖಂಡಿತ ರಾಮನಿಗಾಗಿ ಅಲ್ಲ, ರಾಮನ ನೆಪದಲ್ಲಿ ನಡೆಯುತ್ತಿರುವ ಅಧಿಕಾರಕ್ಕಾಗಿ.

Advertisements

2013ರಲ್ಲಿ ನರೇಂದ್ರ ಮೋದಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಇದರಿಂದ ಕೊಂಚ ಕಸಿವಿಸಿಗೊಂಡ ಬಿಹಾರದ ನಿತೀಶ್ ಕುಮಾರ್, ಎನ್​ಡಿಎ ಒಕ್ಕೂಟದಿಂದ ಹೊರಬಂದರು. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ ಕೇವಲ 2 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಮುಖಭಂಗಕ್ಕೀಡಾದರು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟರು.

ಈಗ ‘ಇಂಡಿಯಾ’ ಒಕ್ಕೂಟದಲ್ಲಿಯೇ ಮುಂದುವರೆದರೆ, ಮತ್ತೊಮ್ಮೆ ಮುಖಭಂಗಕ್ಕೊಳಗಾಗಬಹುದೆಂದು ಭಾವಿಸಿದ ನಿತೀಶ್, ಆರ್‍‌ಜೆಡಿ-ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದಾರೆ. ಹಾಗೆಯೇ ಆರ್‍‌ಜೆಡಿ ಮತ್ತು ಬಿಜೆಪಿಯಿಂದ ಎದುರಾಗಬಹುದಾದ ಶಾಸಕರ ಅಪಹರಣವನ್ನು ತಪ್ಪಿಸಿ, ಪಕ್ಷವನ್ನು ಹಾಗೂ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

ಸದ್ಯಕ್ಕೆ ಗೆಲುವು ಕಂಡಿರುವ ನಿತೀಶ್‌ಗೆ, ಅವರ ಸುದೀರ್ಘ ರಾಜಕೀಯ ಅನುಭವವೇ ಪಾಠ ಕಲಿಸಿಬಹುದು. 2009 ಹಾಗೂ 2019ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ, 40 ಸ್ಥಾನಗಳ ಪೈಕಿ ಕ್ರಮವಾಗಿ 32 ಮತ್ತು 39 ಸ್ಥಾನಗಳನ್ನು ಗೆದ್ದಿತ್ತು. ಈಗ ಈ ಗೆಲುವು ನಿತೀಶ್ ಮತ್ತು ಪ್ರಧಾನಿ ಮೋದಿಯವರಿಗೆ ಮುಖ್ಯವಾಗಿದೆ.

ಬಿಜೆಪಿ ಕೈಯಲ್ಲಿ ಕೇಂದ್ರದ ಪರಮೋಚ್ಛ ಅಧಿಕಾರವಿದೆ. ಈ ಅಧಿಕಾರಕ್ಕೆ, ಯಾರನ್ನು ಯಾವಾಗ ಬೇಕಾದರೂ ಸಿಗಿದು ತೋರಣ ಕಟ್ಟುವ ಸಿಬಿಐ, ಐಟಿ, ಇಡಿ, ನ್ಯಾಯಾಂಗಗಳ ಸಹಕಾರವಿದೆ. ತೋರಣ ಕಟ್ಟಿದ್ದನ್ನು ದೇಶಕ್ಕೇ ತೋರಿ ಚಾರಿತ್ರ್ಯಹರಣ ಮಾಡುವ ಸುದ್ದಿ ಮಾಧ್ಯಮಗಳು ಮೋದಿಯವರ ಮಡಿಲಲ್ಲಿಯೇ ಮಲಗಿವೆ. ಇವುಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಈಗಾಗಲೇ ವಿರೋಧ ಪಕ್ಷಗಳ ನಾಯಕರ ನಡ ಮುರಿದು ಕೂರಿಸಿದ್ದಾಗಿದೆ. ವಿರೋಧ ಪಕ್ಷಗಳ ನಾಯಕರು ಕೂಡ ಒಂದಿಲ್ಲೊಂದು ಹಗರಣದಲ್ಲಿ ಮುಳುಗೇಳುತ್ತಿರುವುದು, ಅವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ.

ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ರಾಜಕೀಯ ನಿವೃತ್ತಿ ಪಡೆದರೆ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ಮೂರು ಸಲ ಇಡಿ ಸಮನ್ಸ್ ನೀಡಿ, ಸಚಿವ ಸಂಪುಟವನ್ನೇ ಜೈಲಿನಲ್ಲಿ ಕೂರಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸದ್ದಡಗಿಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಹಲವು ಕೇಸುಗಳಿಗೆ ಗಂಟುಹಾಕಿ ‘ಇಂಡಿಯಾ’ ಒಕ್ಕೂಟದಿಂದ ಅಂತರ ಕಾಯ್ದುಕೊಳ್ಳುವಂತೆ, ಸ್ವತಂತ್ರವಾಗಿ ಸ್ಪರ್ಧಿಸುವಂತೆ ಹೇಳಿಕೆ ಕೊಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಶರದ್ ಪವಾರ್- ಒಬ್ಬೊಬ್ಬರಿಗೆ ಒಂದೊಂದು ಅಸ್ತ್ರ ಪ್ರಯೋಗಿಸಿ ತಣ್ಣಗಾಗಿಸಿದೆ.

ದೇಶದ ಜನತೆ ಧರ್ಮದ ಸನ್ನಿಗೊಳಗಾಗುವಂತೆ ಮಾಯಾಜಾಲ ಸೃಷ್ಟಿಸಿರುವ ಸಂಘ ಪರಿವಾರದ ಸಂಚನ್ನು ಹಾಗೂ ಪ್ರಧಾನಿಯವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಬಗ್ಗು ಬಡಿಯುತ್ತಿರುವ ಬಗೆಯನ್ನು ರಾಜ್ಯ ಕಾಂಗ್ರೆಸ್ಸಿಗರು ಅರಿತು, ಎಚ್ಚೆತ್ತುಕೊಳ್ಳದೇ ಹೋದರೆ- ಅವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ.

ಏಕೆಂದರೆ, ಭ್ರಷ್ಟ ಬಿಜೆಪಿ ಸರ್ಕಾರ ಕೆಳಗಿಳಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ನಿಂತಿಲ್ಲ. ಪಕ್ಷದೊಳಗಿನ ನಾಯಕರ ಕಾಲೆಳೆದಾಟ ಕೊನೆಯಾಗಿಲ್ಲ. ಅಧಿಕಾರ ಹಂಚಿಕೆಯ ಆಟಕ್ಕೆ ತೆರೆಬಿದ್ದಿಲ್ಲ. ಕಾಂಗ್ರೆಸ್ಸಿಗರೇನು ಸತ್ಯಸಂಧರಲ್ಲ. ಮತ್ತೊಮ್ಮೆ ಪ್ರಧಾನಿಯಾಗುವ ಹಪಾಹಪಿಯಲ್ಲಿರುವ ಮೋದಿಯವರಿಗೆ ಇದಕ್ಕಿಂತ ಬೇರೆ ಬೇಕಿಲ್ಲ. ಕರ್ನಾಟಕ ಯಾವ ಗಳಿಗೆಯಲ್ಲಾದರೂ ಮಹಾರಾಷ್ಟ್ರ ಅಥವಾ ಬಿಹಾರವಾಗಬಹುದಲ್ಲ?

ಜನ ಕರುಣಿಸಿದ ಅಧಿಕಾರವನ್ನು ಜನರಿಗಾಗಿ ಬಳಸದೇ ಹೋದರೆ, ಬಿಹಾರದ ಬೆಳವಣಿಗೆ ಪಾಠವಾಗದೇ ಹೋದರೆ, ಕರ್ನಾಟಕವೂ ಕಮಲದ ಕೈವಶವಾಗಬಹುದು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ, ರಾಮ ನೆಲೆ ನಿಂತರೂ ಸಂಘಿಗಳ ನಾಟಕ ನಿಲ್ಲುವುದಿಲ್ಲ. ಈ ನಾಟಕದ ನಿರ್ದೇಶಕನ ಅಧಿಕಾರದಾಹವನ್ನು ಜನ ಅರ್ಥ ಮಾಡಿಕೊಳ್ಳದಿದ್ದರೆ, ದೇಶಕ್ಕೂ ಉಳಿಗಾಲವಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X