ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್ಚೇರ್ಗಳನ್ನು ವಿತರಿಸಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ ಎನ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ಅರ್ಹ ವಿಕಲಚೇತನರು ಯೋಜನೆಯ ಸೌಲಭ್ಯ ಪಡೆಯಲು ತಮ್ಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಆರ್ಡಬ್ಲ್ಯೂ, ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುಆರ್ಡಬ್ಲ್ಯೂ, ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಆರ್ಡಬ್ಲ್ಯೂ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ನಮೂನೆಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 5ರೊಳಗೆ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಕಲಚೇತನರು ಭಾರತದ ಪ್ರಜೆಯಾಗಿದ್ದು, ಕರ್ನಾಟಕದಲ್ಲಿ ಕನಿಷ್ಟ 10ವರ್ಷಗಳು ವಾಸವಾಗಿರಬೇಕು. ಈ ಯೋಜನೆ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಗಳಿಗಿಂತ ಕಡಿಮೆ ಇರಬೇಕು. ವಿಕಲಚೇತನರ ಅದಿನಿಯಮದಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ಗುರುತಿನ ಚೀಟಿಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಇತರೆ ಇಲಾಖೆಗಳು ಅಥವಾ ಸಂಘಸಂಸ್ಥೆಗಳಿಂದ ಈಗಾಗಲೇ ಬ್ಯಾಟರಿ ಚಾಲಿತ ವ್ಹೀಲ್ಚೇರ್ ಪಡೆದಿದ್ದಲ್ಲಿ ಅಂತಹವರು ಅರ್ಹರಾಗಿರುವುದಿಲ್ಲ.
ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಶೇ.75ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಯಂತ್ರಚಾಲಿತ ದ್ವಿಚಕ್ರ ಮೋಟಾರು ವಾಹನವನ್ನು ಚಾಲನೆ ಮಾಡಲು ಸಾಮರ್ಥ್ಯ ಹೊಂದಿರದ ಹಾಗೂ ಕನಿಷ್ಟ ಒಂದು ಕೈ, ಒಂದು ಕಣ್ಣು ಸ್ವಾಧೀನದಲ್ಲಿದ್ದು ಹಾಗೂ ಬ್ಯಾಟರಿಚಾಲಿತ ವ್ಹೀಲ್ಚೇರ್ ಚಲಾಯಿಸಲು ಇತರೆ ಎಲ್ಲ ರೀತಿಯಲ್ಲಿ ಸದೃಢವಾಗಿರುವ ವಿಕಲಚೇತನರಾಗಿರಬೇಕು. ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಸರ್ಕಾರದಿಂದ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಪಡೆದಿರಬಾರದು.
ಈ ಸುದ್ದಿ ಓದಿದ್ದೀರಾ? ಗದಗ | ಜ.30 ಗಾಂಧಿ ಹುತಾತ್ಮ ದಿನ; ಸೌಹಾರ್ದತೆ ಉಳಿವಿಗಾಗಿ ಮಾನವ ಸರಪಳಿ
ಬ್ಯಾಟರಿ ಚಾಲಿತ ವ್ಹೀಲ್ಚೇರನ್ನು ಅವರ ಜೀವತಾವಧಿಯಲ್ಲಿ ಯಾವುದೇ ಕಾರಣಕ್ಕೂ ಪರಭಾರೆ ಮಾಡಬಾರದು. ಪರಭಾರೆ ಮಾಡಿದ್ದು, ಕಂಡುಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಮಾಹಿತಿ ಸಲಹಾ ಕೇಂದ್ರ ದೂರವಾಣಿ ಸಂಖ್ಯೆ-080-29787441ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ ಎನ್.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.