ಸೌಹಾರ್ದತೆಗಾಗಿ ಗಾಂಧಿಜೀ ಹುತಾತ್ಮರಾದ ದಿನವಾದ ಜನವರಿ 30ದಂದು ಗಜೇಂದ್ರಗಡ ನಗರದ ಕೆ ಕೆ ಸರ್ಕಲ್ ಕೇಂದ್ರವಾಗಿಸಿಕೊಂಡು ಮುಖ್ಯ ರಸ್ತೆಗಳಲ್ಲಿ ಮಾನವ ಸರಪಳಿ ರಚಿಸಲು ತೀರ್ಮಾನಿಸಿದ್ದು, ಈ ಕಾರ್ಯಕ್ರಮವನ್ನು ರೋಣ ವಿಧಾನಸಭಾ ಕ್ಷೇತ್ರದ ಶಾಸಕರು ಉದ್ಘಾಟನೆ ಮಾಡುತ್ತಾರೆ ಎಂದು ಪ್ರಗತಿಪರ ಸಂಘಟನೆಗಳ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದೆ.
ಗದಗ ಜಿಲ್ಲೆ ಗಜೇಂದ್ರಗಡ ನಗರದ ಸೇವಾಲಾಲ ಕಲ್ಯಾಣ ಮಂಟಪದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸಭೆ ಸೇರಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
“ಹಲವು ದಶಕಗಳಿಂದಲೂ ಕರ್ನಾಟಕವನ್ನು`ಸರ್ವ ಜನಾಂಗದ ಶಾಂತಿಯ ತೋಟ’ವೆಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಛಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮ ಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ. ದೇವರು, ಮತಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೆ ಬಳಸಲಾಗುತ್ತಿದೆ” ಎಂದು ಹೇಳಿದರು.
“ನಿತ್ಯದ ದ್ವೇಷ ಭಾಷೆಯಿಂದ ನಮ್ಮ ಸಾಮಾಜಿಕ, ಮತೀಯ ದ್ವೇಷದ ಜೊತೆಗೆ ಅಸ್ಪೃಶ್ಯತೆ, ಜಾತೀಯ ದಮನ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯೂ ಸೌಹಾರ್ದದ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿವೆ” ಎಂದರು.
“ಶತ ಶತಮಾನಗಳ ಇತಿಹಾಸವುಳ್ಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಹಾಗೂ ಜನ ಸಂಸ್ಕೃತಿಯನ್ನು ಗುರುತಿಸಿ ಅದನ್ನು ಮುನ್ನೆಲೆಗೆ ತರುವ ಐತಿಹಾಸಿಕ ಅವಶ್ಯಕತೆ ಉಂಟಾಗಿದೆ. ಪ್ರಸ್ತುತ ಸಮಾಜದಲ್ಲಿ ಸ್ನೇಹಪರತೆ, ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಳಜಿಯುಳ್ಳವರೆಲ್ಲಾ ಒಂದೆಡೆ ಕಲೆತು, ಕುಳಿತು ಕಾರ್ಯಯೋಜನೆ ರೂಪಿಸಿ, ಸೌಹಾರ್ದತೆಯ ಸಂದೇಶವನ್ನು ಜನರ ನಡುವೆ ನಿರಂತರ ಕೊಂಡೊಯ್ಯುವ ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಸೌಹಾರ್ದ ಪರಂಪರೆಯ ಉಳಿಸುವ, ಬೆಳೆಸುವ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುವುದು” ಎಂದರು.
“ನಮ್ಮ ಜನಜೀವನದಲ್ಲಿ, ಆಚಾರ ವಿಚಾರಗಳಲ್ಲಿ ಹಾಸುಹೊಕ್ಕಾಗಿರುವ ಸೌಹಾರ್ದತೆಯ ಪರಂಪರೆಯನ್ನು ಅರಿಯುವುದು, ಅಂತಹ ಮನೋಭಾವವನ್ನು ಸಮಕಾಲಿಕವಾಗಿ ರೂಪಿಸಲು ಮತ್ತು ಅದನ್ನು ಬಲಪಡಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮುತುವರ್ಜಿಯ ಮುಂದುವರಿಕೆಯಾಗಿ ‘ಕರ್ನಾಟಕ ಸೌಹಾರ್ದ ಪರಂಪರೆ’ ಕುರಿತು ಆನ್ ಲೈನ್ ಸರಣಿ ವಿಚಾರ ಉಪನ್ಯಾಸಗಳನ್ನು ನಡೆಸಲಾಗುತ್ತಿದೆ. ಹಲವೆಡೆ ಸೌಹಾರ್ದ ಸಾಹಿತ್ಯದ ಓದು ಅಭಿಯಾನ ಆರಂಭಗೊಂಡಿದೆ. ಅಭಿಯಾನಕ್ಕೆ ಒಂದು ವ್ಯಾಪಕವಾದ ಆಯಾಮವನ್ನು ತರಲು ಸೌಹಾರ್ದತೆಯ ಪರಂಪರೆ ಮತ್ತು ಸಮಕಾಲೀನತೆ ಎನ್ನುವ ಕೇಂದ್ರ ವಸ್ತುವಾಗಿರಿಸಿ ರಾಜ್ಯ ಸಮಾವೇಶವನ್ನು ಇದೇ ಜನವರಿ 11ರಂದು ಬೆಂಗಳೂರಿನಲ್ಲಿ ನಡೆಸಲಾಗಿದೆ. ಜೊತೆಗೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಭಿಯಾನ, ಸಮಾವೇಶಗಳು ನಡೆದಿವೆ” ಎಂದು ತಿಳಿಸಿದರು.
“ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜನವರಿ 30ರಂದು ಇಡೀ ರಾಜ್ಯದಲ್ಲಿ ಬೃಹತ್ ಮಾನವ ಸರಪಳಿ ಹಾಗೂ ಸೌಹಾರ್ದ ಸಭೆಯನ್ನು ಒಳಗೊಂಡಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯುವ ಕಾರಣದಿಂದ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಈ ಸೌಹಾರ್ದ ಮಾನವ ಸರಪಳಿ ಯಶಸ್ವಿಗೋಳಿಸಲು ತೀರ್ಮಾನಿಸಲಾಗಿದೆ. ಜನತೆಯ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
“ಮುಖ್ಯವಾಗಿ ಗಜೇಂದ್ರಗಡದಲ್ಲಿ ಸೌಹಾರ್ದ ಪರಂಪರೆ ಸಾರುವ 18 ಬಾಯಿಗಳು, 18 ಗುಡಿಗಳು, 18 ಮಸೀದಿಗಳನ್ನು ಕಟ್ಟಿಸಲಾಗಿದೆ ಎಂಬುದು ಹೆಮ್ಮೆಯ ವಿಚಾರ. ಇಲ್ಲಿ ಸೌಹಾರ್ದತೆಯು ಮೂಲ ಹಾಸು ಹೊಕ್ಕಾಗಿದೆ ಎಂಬುದು ಸ್ಪಷ್ಟ. ಆದರೆ ಗಜೇಂದ್ರಗಡದಲ್ಲಿ ಇತ್ತೀಚೆಗೆ ಸೌಹಾರ್ದತೆ ಕದಡುವ ಹಲವಾರು ಪ್ರಯತ್ನ ನಡೆಯುತ್ತಿವೆ ಎಂಬುದು ನಮಗೆಲ್ಲಾ ಅನುಭವಕ್ಕೆ ಬಂದಿರುವ ವಿಚಾರ. ಹಾಗೆ ಆಗಬಾರದು ಸೌಹಾರ್ದತೆ, ಸಹಬಾಳ್ವೆಯ ಬದುಕು ಉಳಿಯಬೇಕು .ಅದಕ್ಕೆ ಈ ಸೌಹಾರ್ದ ಮಾನವ ಸರಪಳಿ ಮಾಡಿ ಜನತೆಯಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಯುತ್ತಿದೆ. ಹಾಗಾಗಿ ಇದರಲ್ಲಿ ಯಾವುದೇ ಜಾತಿ, ಮತ, ಧರ್ಮದ ಬೇಧ ಇಲ್ಲದೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗೊಳಿಸಬೇಕು” ಎಂದು ಅವರು ಕರಪತ್ರ ಬಿಡುಗಡೆ ಮಾಡಿ, ಪತ್ರಿಕಾ ಹೇಳಿಕೆ ಮೂಲಕ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಗಾಂಧಿ ಹುತಾತ್ಮ ದಿನದ ಅಂಗವಾಗಿ ಜ. 30ರಂದು ಸೌಹಾರ್ದ ಮಾನವ ಸರಪಳಿ
ಈ ಸಂದರ್ಭದಲ್ಲಿ ಎಂ ಎಸ್ ಹಡಪದ, ಶರಣು ಪೂಜಾರ, ಬಿ ಎನ್ ಕೆಂಚರೆಡ್ಡಿ, ಮಾರುತಿ ಚಿಟಗಿ, ಬಾಲು ರಾಠೋಡ್, ಪೀರು ರಾಠೋಡ್, ಬಸವರಾಜ ಶೀಲವಂತರ, ಬಸವರಾಜ ಹೂಗಾರ್, ಧನು ರಾಠೋಡ್, ರೂಪಲೇಶ ಮಾಳೋತ್ತರ್, ಕಳಕಯ್ಯ ಸಾಲಿಮಠ, ಮೈಬು ಹವಾಲ್ದಾರ್, ಅಲ್ಲಾಭಕ್ಷಿ ಮುಚ್ಚಾಲಿ, ಗಣೇಶ ರಾಠೋಡ್ ಇದ್ದರು.