ಇಲ್ಲಿ ಪ್ರಲ್ಹಾದ ಜೋಷಿ, ಬಿಎಲ್ ಸಂತೋಷನಂಥವರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇವರೆಲ್ಲ ಸಭ್ಯಸ್ಥರಂತೆ, ರಾಷ್ಟ್ರಪ್ರೇಮಿಗಳಂತೆ ಪೋಸ್ ಕೊಡುತ್ತಾ ಹಿಂದಿನಿಂದಲೇ ಎಲ್ಲ ಆಟ ಆಡುತ್ತಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ನಡೆಸುತ್ತಿರುವ ರಾಷ್ಟ್ರಧ್ವಜದ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ನಾಯಕರೆಂದರೆ, ಬಿಜೆಪಿಯ ವಿರೋಧಪಕ್ಷದ ನಾಯಕ ಆರ್.ಅಶೋಕ್, ಸಿ.ಟಿ.ರವಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಪ್ರಿತಂ ಗೌಡ, ಅಶ್ವತ್‌ನಾರಾಯಣ ಮೊದಲಾದವರು. ಈ ಎಲ್ಲರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಮಂಡ್ಯದ ಪ್ರಕರಣವನ್ನು ಇಡೀ ದೇಶವೇ ಗಮನಿಸುತ್ತಿದೆ. ರಾಷ್ಟ್ರಧ್ವಜ ವರ್ಸಸ್ ಭಗವಾಧ್ವಜದ ಈ ಪ್ರಕರಣ ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗುತ್ತಿದೆ. ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಪ್ರತಿಭಟನೆಯಲ್ಲಿ ಒಕ್ಕಲಿಗ ನಾಯಕರನ್ನು ಬಿಟ್ಟರೆ ಉಳಿದ ಯಾರೂ ಕಾಣಿಸುತ್ತಿಲ್ಲ. ಮಾಧ್ಯಮಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್‌ನ ಒಕ್ಕಲಿಗ ನಾಯಕರೇ ರಾಷ್ಟ್ರಧ್ವಜದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಬಹುಶಃ ಬಿಜೆಪಿಯೊಳಗಿನ ಒಕ್ಕಲಿಗರ ಪ್ರಭಾವವನ್ನು ತಗ್ಗಿಸುವ ಬಿಜೆಪಿಯ ಸಂತೋಷ ಬಳಗದ ಮಾಸ್ಟರ್ ಪ್ಲಾನ್ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ
ಬಿಜೆಪಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಆಟ ಆಡುತ್ತಿರುವುದು ಸ್ಪಷ್ಟವಾಗುತ್ತಿದೆ. ಒಂದು ಕಡೆಯಿಂದ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿದಂತೆ ಮಾಡಿ, ಇನ್ನೊಂದು ಕಡೆಯಿಂದ ಒಕ್ಕಲಿಗರ ಪ್ರಾಬಲ್ಯದ ಜೆಡಿಎಸ್ ಹಾಗೂ ಬಿಜೆಪಿಯ ಒಕ್ಕಲಿಗ ನಾಯಕರನ್ನು ಮುಗಿಸುವ ಖತರ್ನಾಕ್ ಷಡ್ಯಂತ್ರ ಮಾಡುತ್ತಿದೆ. ಇಡೀ ದೇಶದ ಜನರ ಮುಂದೆ ಒಕ್ಕಲಿಗ ಸಮುದಾಯದ ನಾಯಕರು ದೇಶದ್ರೋಹಿಗಳೆಂದು ಬಿಜೆಪಿ ಬಿಂಬಿಸಲು ಹೊರಟಿದೆ.
ಇಲ್ಲಿ ಪ್ರಲ್ಹಾದ ಜೋಷಿ, ಸಂತೋಷನಂಥವರು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ? ಇವರೆಲ್ಲ ಸಭ್ಯಸ್ಥರಂತೆ, ರಾಷ್ಟ್ರಪ್ರೇಮಿಗಳಂತೆ ಪೋಸ್ ಕೊಡುತ್ತಾ ಹಿಂದಿನಿಂದಲೇ ಎಲ್ಲ ಆಟ ಆಡುತ್ತಿದ್ದಾರೆ. ವಿಧಾನಸಭಾ ಚುನಾವಣೆಗೂ ಮೊದಲು ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರವನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸಿತ್ತು ಬಿಜೆಪಿ. ಆದರೆ, ಆ ಸಮುದಾಯ ಪ್ರಜ್ಞಾವಂತಿಕೆ ಮೆರೆಯುವ ಮೂಲಕ ಬಿಜೆಪಿಯ ಕುತಂತ್ರವನ್ನು ನಿಷ್ಫಲಗೊಳಿಸಿತ್ತು. ಆದರೆ, ಈಗ ಮತ್ತೆ ಬಿಜೆಪಿ ರಾಷ್ಟ್ರಧ್ವಜ ವರ್ಸಸ್ ಭಗವಾಧ್ವಜ ಎಂಬ ಆಟದ ಮೂಲಕ ಒಕ್ಕಲಿಗ ನಾಯಕರನ್ನು ಮುಂದೆಬಿಟ್ಟು, ಅವರನ್ನು ಮುಗಿಸಲು ಹೊರಟಿರುವುದು ನಿಜಕ್ಕೂ ಹೇಯ ರಾಜಕಾರಣ. ಒಕ್ಕಲಿಗ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಇಡೀ ಸಮುದಾಯವೇ ದೇಶದ್ರೋಹದ ಆರೋಪ ಹೊತ್ತುಕೊಳ್ಳುವಂತೆ ಮಾಡುವಲ್ಲಿ ಬಿಜೆಪಿ ಸಫಲವಾಗುತ್ತದೆ. ಬಿಜೆಪಿಯ ಈ ಕುತಂತ್ರವನ್ನು ಸೋಲಿಸುವ ಜವಾಬ್ದಾರಿ ಎಲ್ಲ ಒಕ್ಕಲಿಗ ಸಮುದಾಯದ ಜನರ ಮೇಲಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ