ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಧ್ವಜ ವಿವಾದದ ಕುರಿತು ಮಾತನಾಡುವಾಗ ಬಿಜೆಪಿ ನಾಯಕ ಸಿ.ಟಿ ರವಿ, ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಮಾಡಿರುವುದು ಈಗ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಧ್ವಜ ವಿವಾದದ ಬಗ್ಗೆ ನಿನ್ನೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಹಿಂದಿಯಲ್ಲಿ ಮಾತನಾಡುತ್ತಿದ್ದ ವೇಳೆ ಸಿ.ಟಿ ರವಿ, “ಹನುಮ ಧ್ವಜವನ್ನು ಕೆಳಗಿಳಿಸಿ ತಾಲಿಬಾನ್ ಧ್ವಜವನ್ನು ಹಾರಿಸಿದ್ದಾರೆ” ಎಂದಿದ್ದಾರೆ. ಅಧಿಕಾರಿಗಳು ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿದ್ದು ನಿಜ, ಅದರ ಬದಲಾಗಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ರಾಷ್ಟ್ರಧ್ವಜವನ್ನು ತಾಲಿಬಾನಿ ಧ್ವಜಕ್ಕೆ ಹೋಲಿಕೆ ಮಾಡಿರುವುದು ಕಾಂಗ್ರೆಸ್ ಪಾಳಯಕ್ಕೆ ಅಸ್ತ್ರವಾಗಿ ಸಿಕ್ಕಿದೆ.
ಧ್ವಜ ವಿವಾದದ ಬಗ್ಗೆ ಇಂದು ಮಂಡ್ಯದ ಪತ್ರಕರ್ತರ ಭವನದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ಮಂಡ್ಯ ಶಾಸಕ ಗಣಿಗ ರವಿ, ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಮತ್ತಿತತರು ಭಾಗವಹಿಸಿದ್ದರು.
ಈ ವೇಳೆ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಆಕ್ರೋಶಭರಿತರಾದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, “ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ಬಿಜೆಪಿಯ ಸಿ ಟಿ ರವಿ ಒಬ್ಬ ಅಯೋಗ್ಯ, ಗಾ…ಡು” ಎಂದು ಹೇಳಿಕೆ ನೀಡಿದ್ದಾರೆ.
“ಸಿ ಟಿ ರವಿ ಒಬ್ಬ ಅಯೋಗ್ಯ. ಇದನ್ನು ಬಹಿರಂಗವಾಗಿಯೇ ಹೇಳುತ್ತೇನೆ. ಯಾಕೆಂದರೆ ಆತ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ್ದಾನೆ. ನಾಲಗೆಯಲ್ಲಿ ಹಿಡಿತವಿರಲಿ. ಯಾವ ವಿಚಾರಕ್ಕೆ ಅವರು ಪ್ರಚೋದನೆ ಕೊಡಲು ಮಂಡ್ಯಕ್ಕೆ ಬರುತ್ತಿದ್ದಾರೆ. ರಾಷ್ಟ್ರಕ್ಕೆ, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡ್ತಿದ್ದಾರೆ. ಹೆತ್ತ ತಾಯಿಗೆ ಅವಮಾನ ಮಾಡ್ತಾರೆ” ಎನ್ನುತ್ತಿದ್ದಾಗ, ಪತ್ರಕರ್ತರು, “ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸರ್ಕಾರಕ್ಕೆ ಭಯ ಯಾಕೆ?” ಎಂದು ಕೇಳಿದಾಗ, “ನಮಗೆ ಅವರ ಬಗ್ಗೆ ಏನೂ ಭಯವಿಲ್ಲ. ಅವನೊಬ್ಬ ಗಾ…ಡು. ನಾವು ಗಂಡಸು. ರಾಷ್ಟ್ರದ ವಿಚಾರ ಬಂದಾಗ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ” ಎಂದು ಆಕ್ರೋಶಭರಿತರಾಗಿ ಶಾಸಕ ನರೇಂದ್ರಸ್ವಾಮಿ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ಹತ್ತಿರ ಕುಳಿತಿದ್ದ ಸಚಿವ ಚಲುವರಾಯಸ್ವಾಮಿ ಮಾತಿನ ಹಿಡಿತ ತಪ್ಪದಂತೆ ಸೂಚಿಸಿರುವುದು ಕಂಡು ಬಂತು.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನ | ತಾಲಿಬಾನ್ ಆಯೋಜಿಸಿದ್ದ ಸಮಾವೇಶದಲ್ಲಿ ಭಾರತ ಸಹಿತ 10 ದೇಶಗಳು ಭಾಗಿ
“ಸಿ ಟಿ ರವಿಯ ವಿರುದ್ಧ ಇಂದೇ ದೂರು ಕೊಡುತ್ತೇನೆ. ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ್ದಾನೆ. ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕ, ತನ್ನ ಪ್ರಾಣ ಕಳಕೊಂಡರೂ ಕೂಡ ಧ್ವಜವನ್ನು ಕೆಳಗೆ ಬೀಳದಂತೆ ಕಾಪಾಡುತ್ತಾನೆ. ಅಂತಹ ಧ್ವಜಕ್ಕೆ ನಮ್ಮ ಜಿಲ್ಲೆಗೆ ಬಂದು ಸಿ ಟಿ ರವಿ ಅವಮಾನ ಮಾಡಿದ್ದಾರೆ. ಜನರಿಗೆ ಮಾಧ್ಯಮಗಳು ಈ ಬಗ್ಗೆ ದಿಕ್ಕು ತೋರಿಸಬೇಕು. ರಾಷ್ಟ್ರಧ್ವಜದ ವಿಚಾರದಲ್ಲಿ ಇಡೀ ದೇಶ ಒಗ್ಗೂಡಬೇಕಿದೆ. ಪ್ರತಿಭಟನೆ ನಡೆಸಬೇಕು” ಎಂದು ಇದೇ ವೇಳೆ ಶಾಸಕ ನರೇಂದ್ರಸ್ವಾಮಿ ಹೇಳಿದ್ದಾರೆ.
ಗಾಂಡು..ಇದು ಯಾವನುಡಿ ಪದ?
ಕನ್ನಡದಲ್ಲಿ ಇದರ ಹುರುಳೇನು?