“ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನಗೊಳಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಪತ್ರಕರ್ತರು, ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಪ್ರತಿಭಟನೆ ಮಾಡಿದ ಬಗ್ಗೆ ಮಾಧ್ಯಮದವರು ಕೇಳಿದಾಗ ಈ ರೀತಿ ಪ್ರತಿಕ್ರಿಯಿಸಿದರು.
“ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ” ಎಂದು ತಿಳಿಸಿದ್ದಾರೆ.
“ಮಂಡ್ಯದ ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ಈಗ ಅವರು ಹೊಸ ಪ್ರಯೋಗ ಮಾಡುವ ಮೂಲಕ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದ ಸಿ ಟಿ ರವಿ ಒಬ್ಬ ಗಾ…ಡು: ಶಾಸಕ ನರೇಂದ್ರಸ್ವಾಮಿ ಕಿಡಿ
ಬಿಜೆಪಿಯವರು ಮನೆ, ಮನೆಗೆ ಹನುಮಧ್ವಜ ಹಂಚುವ ಬಗ್ಗೆ ಕೇಳಿದಾಗ, “ಬೇಡ ಎಂದು ಹೇಳಿದವರು ಯಾರು? ಬಿಜೆಪಿಯವರು ಹರ್ ಘರ್ ತಿರಂಗಾ ಎಂದು ಪ್ರಚಾರ ಮಾಡಿದ್ದರು. ಈಗ ಆ ತಿರಂಗಾವನ್ನು ಯಾಕೆ ಮರೆತಿದ್ದಾರೆ? ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತಿರಂಗಾ ಬದಲಿಗೆ ಕೇಸರಿ ಧ್ವಜವನ್ನೇ ಕಾನೂನು ಮೂಲಕ ತರಲಿ, ಬೇಡ ಎಂದವರು ಯಾರು?” ಎಂದು ಡಿ ಕೆ ಶಿವಕುಮಾರ್ ಛೇಡಿಸಿದರು.