ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೋಳರುಗಿ ಗ್ರಾಮದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದ ಮುಂದೆ ಸ್ವಚ್ಛಗೊಳಿಸಲು ಆಗ್ರಹಿಸಿ ಒಡಲು ದನಿ ವಲಸೆ ಮಹಿಳಾ ಕಾರ್ಮಿಕರ ಒಕ್ಕೂಟದಿಂದ ಕೊಳೂರು ಗ್ರಾಮ ಪಂಚಾಯಿತಿ ಪಿಡಿಒಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷೆ ಇಂದು ಹೊಸಮನಿ ಮಾತನಾಡಿ, “ಸಾವಳಗಿ ಗ್ರಾಮದಲ್ಲಿರುವ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದ ಸುತ್ತಮುತ್ತ ಸ್ವಚ್ಛಗೊಳಿಸಬೇಕು. ಗರಸು ಹಾಕಿಸಿ ಜಲಜೀವನ ಮಿಷನ್ ನೀರಿನ ಸೌಲಭ್ಯ ಮತ್ತು ಕಾಂಪೌಂಡ್ ಗೋಡೆ ಮತ್ತು ಶೌಚಾಲಯ ನಿರ್ಮಿಸಬೇಕು” ಎಂದು ಒತ್ತಾಯಿಸಿದರು.
“ಒಡಲದನಿ ವಲಸೆ ಮಹಿಳಾ ಕಾರ್ಮಿಕರ ಒಕ್ಕೂಟದಿಂದ ಸಂಜೆ ತರಗತಿ ನಡೆಸುತ್ತಿದ್ದೇವೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮುದಾಯ ಭವನದಲ್ಲಿ ಈ ತರಬೇತಿ ನಡೆಸಲಾಗುತ್ತದೆ.
ಸಮುದಾಯ ಭವನದ ಸುತ್ತಮುತ್ತ ಕೊಳಚೆ ನೀರು, ಗಲೀಜು ಇರುವುದರಿಂದ ಮಕ್ಕಳಿಗೆ ತರಬೇತಿ ನಡೆಸಲು ಆಗುತ್ತಿಲ್ಲ. ಕೊಳಚೆ ನೀರಿನ ಗಬ್ಬು ವಾಸನೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರಿಂದ ಮಕ್ಕಳು ಡೆಂಗಿ ಜ್ವರ, ಕೆಮ್ಮು ನೆಗಡಿ ಇತರ ರೋಗಗಳಿಗೆ ತುತ್ತಾಗುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮುದಾಯ ಭವನದಲ್ಲಿ ಸ್ಥಳೀಯ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಉಚಿತ ತರಬೇತಿ(ಟ್ಯೂಷನ್) ಕೇಂದ್ರವನ್ನು ಆರಂಭಿಸಿದ್ದೇವೆ.
ಹಾಗೂ ಪ್ರತಿ ಶನಿವಾರ ಮತ್ತು ಭಾನುವಾರ ವಲಸೆ ಮಹಿಳಾ ಕಾರ್ಮಿಕರ ಒಕ್ಕೂಟ ಮತ್ತು ಸ್ಥಳೀಯ ಸ್ವ ಸಹಾಯ ಸಂಘಗಳ ಸಭೆ ನಡೆಸಲಾಗುತ್ತದೆ. ಸಮುದಾಯ ಭವನದ ಮುಂಭಾಗದಲ್ಲಿ ಕಸದ ತಿಪ್ಪೆಗಳಿವೆ. ಅದರ ಸುತ್ತಮುತ್ತ ತುಂಬಾ ಕೊಳಚೆ ವಾಸನೆ ಬರುತ್ತಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾಲೇಜಿಗೆ ಹೋಗೆಂದಿದ್ದಕ್ಕೆ ಬಾವಿಗೆ ಹಾರಿದ ಯುವತಿ; ಅಣ್ಣನೂ ಸಾವು
“ಮನವಿಗೆ ಸರಿಯಾಗಿ ಸ್ಪಂದಿಸದಿದ್ದರೆ ಮುಂದಿನ ಹಂತದಲ್ಲಿ ಹೋರಾಟ ಮಾಡಲು ಸಿದ್ದರಾಗುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ರಾಜಶ್ರೀ ಮಕನಾಪುರ್, ಜ್ಯೋತಿ ಹೊಸಮನಿ, ಸುಜಾತ ಚಲವಾದಿ, ಸುನಿಲ್ ಹೊಸಮನಿ, ಬಸವರಾಜ್ ಕಾಂಬ್ಳೆ, ಲಕ್ಷ್ಮಿ ಕಟ್ಟಿಮನಿ, ಪಾರ್ವತಿ ಹರಿಜನ್ ಸೇರಿದಂತೆ ಇತರರು ಇದ್ದರು.