ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಉಭಯ ಸದನಗಳಿಂದ ಅಮಾನತುಗೊಂಡಿದ್ದ ವಿಪಕ್ಷಗಳ 146 ಸಂಸದರ ಅಮಾನತು ನಿರ್ಧಾರವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಮಾನತುಗೊಂಡಿದ್ದ ಸಂಸದರ ಅಮಾನತು ನಿರ್ಧಾರವನ್ನು ಹಿಂಪಡೆಯುವಂತೆ ಲೋಕಸಭೆ ಹಾಗೂ ರಾಜ್ಯಸಭೆಯ ಉಸ್ತುವಾರಿ ಅಧಿಕಾರಿಗಳಿಗೆ ಮನವಿ ಮಾಡಿದೆ ಎಂದು ತಿಳಿಸಿದರು.
ಜನವರಿ 31ರಂದು ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲಿ ಸಚಿವರು ಈ ವಿಷಯ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
“ಎಲ್ಲ ಸಂಸದರ ಅಮಾನತನ್ನು ವಾಪಸ್ ಪಡೆಯಲಾಗುವುದು. ಈ ಬಗ್ಗೆ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇವೆ. ಸರ್ಕಾರದ ಪರವಾಗಿ ಮನವಿ ಸಲ್ಲಿಸಿದ್ದೇವೆ. ಇದು ಸ್ಪೀಕರ್ ಹಾಗೂ ಸಭಾಧ್ಯಕ್ಷರ ವ್ಯಾಪ್ತಿಯಲ್ಲಿದೆ. ಹಾಗಾಗಿ ಉಭಯ ಸದನಗಳ ಇಬ್ಬರಿಗೂ ಹಕ್ಕು ಭಾದ್ಯತಾ ಸಮಿತಿಯೊಂದಿಗೆ ಮಾತನಾಡಿ ಅಮಾನತು ವಾಪಸ್ ಪಡೆದು ಸದನಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ” ಎಂದು ಪ್ರಲ್ಹಾದ್ ಜೋಷಿ ತಿಳಿಸಿದರು.
ನಾಳೆ ಸದನಕ್ಕೆ ಸದಸ್ಯರು ಬರಬಹುದೇ ಎಂಬ ಪ್ರಶ್ನೆಗೆ ಸಚಿವರು ಹೌದು ಎಂದು ಉತ್ತರಿಸಿದರು.
ಸರ್ವಪಕ್ಷ ಸಭೆಯಲ್ಲಿ 30 ಪಕ್ಷಗಳ 45 ನಾಯಕರು ಭಾಗವಹಿಸಿದ್ದರು. ಈ ಅಧಿವೇಶನವು 17ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿದೆ. ನಾಳೆ ಆರಂಭವಾಗುವ ಬಜೆಟ್ ಅಧಿವೇಶನವು ಫೆ.09 ರಂದು ಕೊನೆಗೊಳ್ಳಲಿದೆ.
ಬಜೆಟ್ ಅಧಿವೇಶನದಲ್ಲಿ ಹಣದುಬ್ಬರ ಹಾಗೂ ನಿರುದ್ಯೋಗದ ಬಗ್ಗೆ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ತಿಳಿಸಿದ್ದಾರೆ.