ಕರ್ನಾಟಕವನ್ನು ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿ ಉಳಿಸಿಕೊಳ್ಳಬೇಕಿದೆ ಎಂದು ಸೌಹಾರ್ದ ಕರ್ನಾಟಕ ವೇದಿಕೆ ಹೇಳಿದೆ.
ಗಾಂಧಿ ಹುತಾತ್ಮ ದಿನದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸೌಹಾರ್ದ ಕರ್ನಾಟಕ ವೇದಿಕೆಯಡಿ ಎಲ್ಲ ಪ್ರಗತಿಪರ, ಕನ್ನಡಪರ, ಜನಪರ, ಸಾಹಿತ್ಉಯ ಸಂಘಟನೆಗಳು ಸೌಹಾರ್ದ ಮಾನವ ಸರಪಳಿ ರಚಿಸಿ, ಸೌಹಾರ್ದ ಸಂದೇಶ ಸಾರಿವೆ.
“ಕಣ್ಣಿಗೆ ಕಣ್ಣು ಎಂಬ ನೀತಿಯು ಜಗತ್ತನ್ನೇ ಕುರುಡಾಗಿಸುತ್ತದೆ ಎಂದು ಗಾಂಧೀಜಿಯವರು ಹೇಳಿದ್ದರು. ನಮ್ಮ ದೇಶ ಸೌಹಾರ್ದ ಪರಂಪರೆಗೆ ಹೆಸರಾಗಿದೆ. ಬಸವಣ್ಣನವರು ‘ಇವನಾರವ ಎನ್ನದೆ ಎಲ್ಲರನ್ನು ಇವ ನಮ್ಮವರೆಂದು’ ಅಪ್ಪಿಕೊಳ್ಳುವ ತತ್ವ ಸಾರಿದ್ದಾರೆ. ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ದೇವರನ್ನು ಹುಡುಕುವುದಕ್ಕಿಂತ ಮಾನವರಲ್ಲಿರುವ ಪ್ರೀತಿ, ಸ್ನೇಹಗಳನ್ನು ಗುರುತಿಸಿ ಎಂದು ಹೇಳುತ್ತಾರೆ. ನಮ್ಮ ನಾಡು ಸಾಧು, ಸೂಫಿ ಸಂತರ, ಶರಣರು ಸೌಹಾರ್ದತೆಯ ಸಿದ್ಧಾಂತವನ್ನು ದೇಶಕ್ಕೆ ಸಾರಿದ್ದಾರೆ” ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ
“ನಾವು ಧರ್ಮಗಳಿಗೂ ಸಮದೃಷ್ಟಿಯಿಂದ ಕಾಣುವ ಪರಧರ್ಮಗಳ ಬಗ್ಗೆ ಗೌರವ ನೀಡಬೆಕು. ದೇಶದ ಏಕತೆ, ಸಮಾನತೆ, ಸಹೋದರತೆ, ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಎಲ್ಲ ಧರ್ಮೀಯರು ಒಟ್ಟಾಗಿ ಶ್ರಮಿಸಬೇಕಿದೆ” ಎಂದರು.
ಕಾರ್ಯಕ್ರಮದಲ್ಲಿ ಜೆ. ಕಲೀಂಬಾಷ, ನಿಜಗುಣ ಹವಳಪ್ಪ, ಕೊಟ್ರಪ್ಪ ಹೆಚ್.ಕೆ. ಪಿ.ಜೆ.ಮಹಾಂತೇಶ, ಗೋವಿಂದರೆಡ್ಡಿ ನಂದಿಗಾವಿ , ಪ್ರೀತಂ ಬಾಬು, ರಮೇಶ ಮಾನೆ, ಸೈಯದ್ ರಹಮಾನ್ ಬಾಂಬೆ, ಇಲಿಯಾಜ್ ಅಹಮ್ಮದ್, ಬಿ.ಮಗ್ಗುಂ, ಸೈಯದ್ ಅಹಮ್ಮದ್, ಎಲ್. ಬಿ. ಹನುಮಂತಪ್ಪ, ಆಬೀದ್ ಅಲಿ, ಸಿ.ಎನ್. ಹುಲಿಗೇಶ್, ಸುಬ್ರಮಣ್ಯ ನಾಡಿಗೇರ್, ಅನ್ವರ್ ಪಾಷಾ, ಅಜೀಜುರ್ ರಹ್ಯಾನ್, ರೇವಣಸಿದ್ದಪ್ಪ, ನಾಗರಾಜ ಮೆಹಲ್ವಾಡ ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.