ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 60ಕಿ.ಮೀ. ಸುರಂಗ ರಸ್ತೆ ನಿರ್ಮಾಣ ಮಾಡುವ ಕಾಂಗ್ರೆಸ್ ಸರ್ಕಾರದ ಯೋಜನೆಗೆ ಆಮ್ ಆದ್ಮಿ ಪಕ್ಷ ವಿರೋಧ ವ್ಯಕ್ತಪಡಿಸಿದೆ.
ಸುರಂಗ ರಸ್ತೆ ಯೋಜನೆ ಬದಲು ಉಪನಗರ ರೈಲು ಮತ್ತು ಮೆಟ್ರೋ ಮಾರ್ಗಗಳ ವಿಸ್ತರಣೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದ್ದಾರೆ.
“1 ಕಿ.ಮೀ ಸುರಂಗ ರಸ್ತೆಗೆ ₹500 ಕೋಟಿ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. 60 ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ ₹30,000 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾಲು ಎಷ್ಟಿದೆ? ಇದು ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡಲು ಮಾಡುತ್ತಿರುವ ಯೋಜನೆ” ಎಂದು ಆರೋಪಿಸಿದರು.
“ಸುರಂಗ ರಸ್ತೆ ನಿರ್ಮಾಣದಿಂದ ಎಷ್ಟು ಟ್ರಾಫಿಕ್ ಕಡಿಮೆಯಾಗಲಿದೆ ಎನ್ನುವ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಿಲ್ಲ. ಯಾವ ದೇಶಕ್ಕೆ ಹೋಗಿ ಇದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಗೊತ್ತಿಲ್ಲ. ಇದು ಡಿ.ಕೆ.ಶಿವಕುಮಾರ್ ಅವರ ಯೋಜನೆ, ಅವರಿಗೆ ಎಷ್ಟು ಪರ್ಸೆಂಟ್ ಕಮಿಷನ್ ಹೋಗುತ್ತೆ ಎನ್ನುವುದು ಪ್ರಶ್ನೆಯಾಗಿದೆ” ಎಂದರು.
“ಸುರಂಗ ರಸ್ತೆಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲ್ಲ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಲಾಗಿದೆ. ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಈ ರೀತಿ ಇರುವಾಗ ಸುರಂಗ ರಸ್ತೆ ನಿರ್ಮಾಣ ಮಾಡಿದರೆ, ಸುರಕ್ಷತೆ ಯಾವ ಮಟ್ಟದಲ್ಲಿರುತ್ತದೆ ಎನ್ನುವ ಆತಂಕ ಕಾಡುತ್ತದೆ” ಎಂದರು.
“2018ರ ಮುಂಚೆ ಎಲಿವೇಟೆಡ್ ಕಾರಿಡಾರ್ ಮಾಡುತ್ತೇವೆ ಎಂದು ಸ್ಟೀಲ್ ಬ್ರಿಡ್ಜ್ ಮಾಡಲು ಹೋಗಿ ಜನಾಕ್ರೋಶಕ್ಕೆ ಗುರಿಯಾಗಿದ್ದರು. ಈಗ ಮತ್ತೆ ಅದೇ ಭಂಡಗೆಟ್ಟ ಸರ್ಕಾರ ಬಂದಿದ್ದು, ಸುರಂಗ ರಸ್ತೆ ಮಾಡೇ ಮಾಡ್ತೀವಿ ಎನ್ನುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಉಪನಗರ ರೈಲು ಯೋಜನೆ ಸಮರ್ಪಕವಾಗಿ ಪೂರ್ತಿ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ. ಮೆಟ್ರೋ ಮಾರ್ಗಗಳನ್ನು ವಿಸ್ತರಣೆ ಮಾಡಿದರೆ ಸಾಕು, ಉಪನಗರ ರೈಲನ್ನು ನಗರದ ಅಕ್ಕಪಕ್ಕದ ನಗರಗಳಿಗೆ ವಿಸ್ತರಣೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಇದೆಲ್ಲಾ ಬಿಟ್ಟು ಸುರಂಗ ರಸ್ತೆ ನಿರ್ಮಾಣ ಮಾಡುತ್ತಿರುವುದು ಭ್ರಷ್ಟಾಚಾರ ಮಾಡಲು” ಎಂದು ಆರೋಪಿಸಿದರು.
“ಆಮ್ ಆದ್ಮಿ ಪಕ್ಷ ಸುರಂಗ ರಸ್ತೆ ಯೋಜನೆಯನ್ನು ವಿರೋಧಿಸುತ್ತಿದೆ. ಇದೇ ಫೆಬ್ರವರಿ 3ರ ಶನಿವಾರ ನಗರದ ಶಾಸಕರ ಭವನದಲ್ಲಿ ಸುರಂಗ ರಸ್ತೆಯಾ? ಅಥವಾ ಉಪನಗರ ರೈಲಾ? ಎನ್ನುವ ವಿಚಾರದ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಂಡಿದ್ದೇವೆ. ನಗರ ತಜ್ಞರು, ಸಾಮಾಜಿಕ ತಜ್ಞರು ಪಾಲ್ಗೊಂಡು ಈ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ. ಬಳಿಕ ಚರ್ಚೆಯ ನಿರ್ಣಯಗಳನ್ನು ಸರ್ಕಾರಕ್ಕೆ ತಲುಪಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಸಾಲ ತೀರಿಸಲು ಯುಟ್ಯೂಬ್, ವೆಬ್‌ಸೀರಿಸ್ ನೋಡಿ ತಾಯಿಯ ಸ್ನೇಹಿತೆ ಮನೆಗೆ ಕನ್ನ
“ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರು ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಬೆಂಗಳೂರು ಜನತೆಗೆ ಏನು ಬೇಕು ಎನ್ನುವುದು ಗೊತ್ತಿದೆ. ನೀವು ಹೇಳಿದ್ದಕ್ಕೆಲ್ಲಾ ಜನ ತಲೆ ಆಡಿಸುವುದಿಲ್ಲ. ಬ್ರಾಂಡ್ ಬೆಂಗಳೂರಿನಲ್ಲಿ ಮೋಸ ಮಾಡಿದಂತೆ ಸುರಂಗ ರಸ್ತೆ ವಿಚಾರದಲ್ಲಿ ಮೋಸ ಮಾಡಲು ಆಗಲ್ಲ. ಸುರಂಗ ರಸ್ತೆ ಬಗ್ಗೆ ಏನೆಲ್ಲಾ ಅನುಕೂಲ ಇದೆ ಎಂದು ಶ್ವೇತಪತ್ರ ಹೊರಡಿಸಿ” ಎಂದು ಒತ್ತಾಯಿಸಿದರು.