- ಕಟೀಲ್‌ಗೆ ಪತ್ರ ಬರೆದ ಬಿಜೆಪಿ 16 ಚುನಾಯಿತ ಸದಸ್ಯರು
- ಬಿಜೆಪಿ ಅಭ್ಯರ್ಥಿಗಳ ಎರಡೂ ಪಟ್ಟಿಯಲ್ಲಿಲ್ಲ ಶೆಟ್ಟರ್ ಹೆಸರು
ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದೆ ತಡ ಒಂದೊಂದೆ ಸಂಕಷ್ಟ ಎದುರಿಸುತ್ತಿದೆ. ಹುಬ್ಬಳಿ ಧಾರವಾಡ ಕ್ಷೇತ್ರದ ಟಿಕೆಟ್ ಘೋಷಣೆ ವಿಳಂಬ ಖಂಡಿಸಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಈಗಾಗಲೇ 212 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಎರಡರಲ್ಲೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೆಸರಿಲ್ಲ. ಈ ಕುರಿತು ಅವರೇ ಅಸಮಾಧಾನ ಹೊರಹಾಕಿ, ಟಿಕೆಟ್ ನಿರಾಕರಣೆಯ ಕಾರಣ ತಿಳಿಸಿ ಎಂದಿದ್ದರು.
ಹುಬ್ಬಳಿ ಧಾರವಾಡ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಟಿಕೆಟ್ ಘೋಷಣೆಯನ್ನು ಬೇಕಂತಲೇ ಬಿಜೆಪಿ ತಡೆ ಹಿಡಿದಿದೆ. ಪಕ್ಷದ ಈ ನಿರ್ಧಾರವನ್ನು ಖಂಡಿಸಿರುವ ಮಹಾನಗರ ಪಾಲಿಕೆಯ 16 ಚುನಾಯಿತ ಸದಸ್ಯರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದು, ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಹುಬ್ಬಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವಲ್ಲಿ ತಾವು ವಿಳಂಬ ನೀತಿ ಅನುಸರಿಸುತ್ತಿರುವುದು ಅತೀ ದುಃಖದ ಸಂಗತಿ” ಎಂದು ಪತ್ರದಲ್ಲಿ ಬರೆಯಲಾಗಿದೆ.
“ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಶೆಟ್ಟರ್ ಅವರಿಗೆ ಟಿಕೆಟ್ ನೀಡುವುದು ಅವಶ್ಯಕ. ಈ ವಿಳಂಬ ನೀತಿ ಖಂಡಿಸಿ ಒಟ್ಟು ಬಿಜೆಪಿ ಮಹಾನಗರ ಪಾಲಿಕೆಯ 16 ಬಿಜೆಪಿ ಸದಸ್ಯರು, ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಚುನಾವಣೆಗೆ ದಿನಗಣನೆ ಆರಂಭವಾದ ಹೊತ್ತಲ್ಲೇ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಒಂದೆಡೆ ಟಿಕೆಟ್ ವಂಚಿತ ಆಕಾಂಕ್ಷಿಗಳು ಪಕ್ಷಕ್ಕೆ ಸೆಡ್ಡು ಹೊಡೆದು ಹೊರಟರೆ, ಮತ್ತೊಂದೆಡೆ ಪಕ್ಷದ ಸ್ಥಳೀಯ ನಾಯಕರು ಸಹ ಬಿಜೆಪಿಗೆ ವಿದಾಯ ಹೇಳುತ್ತಿದ್ದಾರೆ.