ಕಾಲೇಜು ಮುಗಿಸಿ ಮನೆಗೆ ನಡೆದುಕೊಂಡು ಮರಳುತ್ತಿದ್ದ ವಿದ್ಯಾರ್ಥಿನಿಗೆ ಟಂಟಂ ವಾಹನವು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಕಿತ್ತೂರು-ಬೀಡಿ ರಸ್ತೆಯ ಫಾರೆಸ್ಟ್ ನಾಕಾ ಬಳಿ ಬುಧವಾರ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ 3ನೇ ಸೆಮಿಸ್ಟರ್ ಓದುತ್ತಿದ್ದ ಕಾವೇರಿ ಕಾಜಗಾರ (21) ಮೃತ ವಿದ್ಯಾರ್ಥಿನಿ.
ಮೃತ ವಿದ್ಯಾರ್ಥಿನಿ ಕಿತ್ತೂರು ಹೊರವಲಯದ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತರಗತಿ ಮುಗಿಸಿ ಎಂದಿನಂತೆ ಮನೆ ಕಡೆಗೆ ಕಾಲ್ನಡಿಗೆಯಲ್ಲಿ ಹೋಗುವಾಗ ಏಕಾಏಕಿ ಬಂದ ಟಂಟಂ ವಾಹನ ವಿದ್ಯಾರ್ಥಿನಿ ಮೇಲೆಯೇ ಹರಿಯಿತು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಗೆ ಸ್ಥಳೀಯರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾವೇರಿ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದರು.
ಅಪಘಾತಕ್ಕೆ ಕಾರಣನಾದ ಟಂಟಂನ ಚಾಲಕ ದೇಗಾಂವ ಗ್ರಾಮದ ಅನಿಲ್ ಚಿವಟಗುಂಡಿ ಎಂಬುವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯ ಸಹಪಾಠಿಗಳು ಆಸ್ಪತ್ರೆಗೆ ಧಾವಿಸಿ, ವಿದ್ಯಾರ್ಥಿನಿ ಸಾವಿಗೆ ಕಣ್ಣಿರಾದರು. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?
ಈ ಘಟನೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.