ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ ಬಾಬಾ ಸಾಹೇಬರು ಜಗತ್ತಿನಲ್ಲಿಯೇ ಅತ್ಯುತ್ತಮವಾದ ಸಂವಿದಾನವನ್ನು ಕೊಡುಗೆಯಾಗಿ ನಮಗೆ ನೀಡಿದ್ದಾರೆ. ಭಾರತದ ಸಂವಿಧಾನ ತಯಾರಿ ಮತ್ತು ಅದರ ಪ್ರಾಮುಖ್ಯತೆ ಕುರಿತು ಜನರಲ್ಲಿ ಅರಿವು ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಅಭಿಯಾನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಗೌರಿಬಿದನೂರು ತಾ ಪಂ ಇಒ ಮಂಜುನಾಥ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಪೋಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಿ ವಿ ಆನಂದ್ ಮಾತನಾಡಿ, “ಪ್ರಪಂಚದಲ್ಲಿಯೇ ಅತಿ ದೊಡ್ಡ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ಆಗ ಮಾತ್ರ ನಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಸಂವಿಧಾನದ ಕುರಿತು ಹೆಚ್ಚು ಓದಿ ಅರಿಯಬೇಕಿದೆ. ಸಂವಿಧಾನ ಜಾಗೃತಿ ಅಭಿಯಾನವು ಜನರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಬಹಳಷ್ಟು ಸಹಕಾರಿಯಾಗಲಿದೆ” ಎಂದರು.
ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, “ಸಂವಿಧಾನ ಜಾಗೃತಿ ಜಾಥಾ ಸ್ತಬ್ದಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲಾಗಿದೆ. ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ಬದುಕು ಕಟ್ಟಿಕೊಳ್ಳಬೇಕು” ಎಂದು ಕರೆ ನೀಡಿದರು.
ಉಸ್ತುವಾರಿ ಸಚಿವ ಡಾ ಎಂ ಸಿ ಸುಧಾಕರ್ ಚಾಲನೆ ನೀಡಿದ ಸಂವಿಧಾನ ಜಾಗೃತಿ ಜಾಥಾ ರಥವು ಮಂಗಳವಾರ ಗೌರಿಬಿದನೂರು ತಾಲೂಕಿನ ಪೋಶೆಟ್ಟಿಹಳ್ಳಿ ಗ್ರಾಮವನ್ನು ತಲುಪಿತು.
ಜಾಗೃತಿ ಜಾಥಾ ರಥವನ್ನು ಗೌರಿಬಿದನೂರು ವೃತ್ತ ನಿರೀಕ್ಷಕ ಸತ್ಯ ನಾರಾಯಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆಯರು, ದಲಿತ ಸಂಘಟನೆ ಮುಖಂಡರು ಅದ್ದೂರಿ ಸ್ವಾಗತ ಕೋರಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಸಂವಹನ ಕುರಿತ ವಿಚಾರ ಸಂಕಿರಣ
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ ಎನ್ ಶೇಷಾದ್ರಿ, ನೋಡಲ್ ಉಸ್ತುವಾರಿ ವಿವೇಕ್ ಮಹದೇವ್, ಪೋಶೆಟ್ಟಿಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಅಲುಮೇಲಮ್ಮ, ವೆಂಕಟೇಶ್, ದಲಿತ ಮುಖಂಡರುಗಳಾದ ಗಂಗಾಧರ ಗೌತಮ್, ಪ್ರೌಡಶಾಲಾ ಮುಖ್ಯ ಶಿಕ್ಷಕ ಮಹೇಶ್ವರಪ್ಪ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶಾಂತಲಾ, ಹಾಸ್ಟೆಲ್ ವಾರ್ಡನ್ ಮಂಜುನಾಥ್, ಬಿ ಕೆ ದಿನೇಶ್, ಪಿಳ್ಳಪ್ಪ, ಬಾಲಪ್ಪ ಸುಬ್ಬರಾಯಪ್ಪ, ಗ್ರಾ ಪಂ ಸದಸ್ಯ ನಾಗಣ್ಣ ಪಿ ಎಸ್, ನಾಗರಾಜ್, ರಮೇಶ್, ಬಾಲಕೃಷ್ಣ ಸೇರಿದಂತೆ ಇತರರು ಇದ್ದರು.