ಆದಿಕವಿ ಪಂಪನಿಂದ ಹಿಡಿದು ಜನರ ಕವಿ ಸರ್ವಜ್ಞನವರೆಗೆ ಕನ್ನಡದ ಬಹುಪಾಲು ಕವಿಗಳು ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ಕೃಷಿಯನ್ನು ಒಂದು ವೃತ್ತಿಯಾಗಷ್ಟೇ ಅಲ್ಲದೆ, ಒಂದು ಮನೋವೃತ್ತಿಯಾಗಿಯೂ ಗ್ರಹಿಸಿ ಉಲ್ಲೇಖಿಸಿದ್ದಾರೆ ಎಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ ಸಿ ಬಿ ಚಿಲ್ಕರಾಗಿ ಅಭಿಪ್ರಾಯಪಟ್ಟರು.
ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕೃಷಿ ವಿಶ್ವವಿದ್ಯಾಲಯದ ಆಡಳಿತಾಂಗ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ವೇದಿಕೆ’ ಕಾರ್ಯಕ್ರಮದಲ್ಲಿ ‘ಕನ್ನಡ ಶಾಸ್ತ್ರಸಾಹಿತ್ಯ ಮತ್ತು ಕೃಷಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
“ಅನಾದಿ ಕಾಲದಿಂದಲೂ ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಸಹಜವಾಗಿ ಪ್ರಾಚೀನ ಕಾಲದ ಸಾಹಿತ್ಯ ಕೃತಿಗಳಲ್ಲಿ ಕೃಷಿ ಜೀವನ ಮತ್ತು ಮೌಲ್ಯಗಳು ಹಾಸುಹೊಕ್ಕಾಗಿವೆ” ಎಂದರು.
“ಕೃಷಿ ವಿಜ್ಞಾನ ಸಾಹಿತ್ಯದ ಪ್ರಸ್ತುತ ಸ್ಥಿತಿ-ಗತಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಮತ್ತು ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪ್ರಮೋದ ಕಟ್ಟಿಯವರು, “ಕೃಷಿಯ ಬಗ್ಗೆ ಬರೆಯಲಾಗಿರುವ ಕೃತಿಗಳನ್ನೆಲ್ಲ ಕೃಷಿ ವಿಜ್ಞಾನ ಸಾಹಿತ್ಯ ಎಂದು ಮೇಲ್ಮಟ್ಟದಲ್ಲಿ ಗ್ರಹಿಸಿ ಹೇಳುವ ಪರಿಪಾಠ ತಪ್ಪು. ಕೃಷಿಯ ಕುರಿತ ಜ್ಞಾನದಷ್ಟೇ ಅದರ ಕಲಾತ್ಮಕ ಮಂಡನೆಯೂ ಹದವಾಗಿ ಬೆರೆತಾಗ ಅದು ಕೃಷಿ ವಿಜ್ಞಾನ ಸಾಹಿತ್ಯ ಎನಿಸಿಕೊಳ್ಳುತ್ತದೆ. ಕನ್ನಡದಲ್ಲಿ ಈ ನಿಟ್ಟಿನಲ್ಲಿ ನಿರಾಶೆಯಾಗುವಷ್ಟು ಕಡಿಮೆ ಕೆಲಸವಾಗಿದೆ” ಎಂದರು.
‘ಕೃಷಿವಿಜ್ಞಾನ ಸಾಹಿತ್ಯ ರಚನೆಯ ಸವಾಲುಗಳು’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ ಬೆಂಗಳೂರಿನ ಕೃಷಿ ಆಯುಕ್ತಾಲಯದ ಅಧಿಕಾರಿ ಡಾ. ನೂರ್ ಸಮದ್ ಅಬ್ಬಲಗೆರೆಯವರು, ಕೃಷಿವಿಜ್ಞಾನಕ್ಕೆ ಸಂಬಂಧಿಸಿದಂತೆ ಸಾಹಿತ್ಯ ರಚಿಸುವಾಗ ಎದುರಾಗುವ ಸಮಸ್ಯೆಗಳ ಸ್ವರೂಪವನ್ನು ತಮ್ಮದೇ ‘ವಿಸ್ಮಯ ಕೀಟ ಪ್ರಪಂಚ’ ಕೃತಿಯ ಆಧಾರ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರ ನೇಮಕ
ಕುಲಪತಿ ಡಾ. ಎಂ ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಡಾ. ಚಿದಾನಂದ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೃ ವಿ ವಿ ಗ್ರಂಥಪಾಲಕ ಡಾ.ಮಚ್ಛೇಂದ್ರನಾಥ ಸ್ವಾಗತಿಸಿದರು, ಡಾ ಬಸವಣ್ಣೆಪ್ಪ ವಂದಿಸಿದರು, ಡಾ ಬಿ ವಿಜಯರಾಜೇಂದ್ರ ನಿರೂಪಿಸಿದರು.
ವರದಿ : ಹಫೀಜುಲ್ಲ