ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರನ್ನು ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಡಾ. ಸಿ.ಎನ್.ಮಂಜುನಾಥ ಅವರ ಅವಧಿ ಮುಕ್ತಾಯದ ಹಿನ್ನೆಲೆ ಪ್ರಭಾರ ನಿರ್ದೇಶಕರನ್ನಾಗಿ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 69 ವಯಸ್ಸಿನ ರವೀಂದ್ರನಾಥ್ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ಅವರ ನಿವೃತ್ತಿ ಹಿನ್ನಲೆ ಜಯದೇವ ಆಸ್ಪತ್ರೆ ಸಿಬ್ಬಂದಿ ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುವುದರ ಜತೆಗೆ ಆರತಿ ಬೆಳಗಿ ಗೌರವಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಜನವರಿ 31ರಂದು ಮುಕ್ತಾಯವಾಗಿದೆ. ಈಗಾಗಲೇ, ಡಾ.ಮಂಜುನಾಥ್ ಅವರ ಸೇವಾವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದ್ದು, ಈ ಬಾರಿ ಹೊಸ ನಿರ್ದೇಶಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ, ಜಯದೇವ ಆಸ್ಪತ್ರೆಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡುವ ಮುನ್ನ ರಾಜ್ಯ ಸರ್ಕಾರ ಸದ್ಯಕ್ಕೆ ಡಾ.ರವೀಂದ್ರನಾಥ್ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
ಸಂಸ್ಥೆಯ ನಿರ್ದೇಶಕ ಹುದ್ದೆಗೆ ಜ.12ರಂದು ಪ್ರಕಟಣೆ ಹೊರಡಿಸಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ, ಅರ್ಜಿ ಸಲ್ಲಿಕೆಗೆ ಜ.19ರವರೆಗೆ ಕಾಲಾವಕಾಶ ನೀಡಿತ್ತು. ಈ ಹುದ್ದೆಗೆ ಒಟ್ಟು 22 ಅರ್ಜಿ ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 11 ಅರ್ಜಿಗಳ ಕಿರುಪಟ್ಟಿಯನ್ನು ಇಲಾಖೆ ತಯಾರಿಸಿತ್ತು. ಆದರೆ, ಪೂರ್ಣಾವಧಿ ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ.
ಜಯದೇವ ಆಸ್ಪತ್ರೆಗೆ ಪ್ರಭಾರ ನಿರ್ದೇಶಕ ಸ್ಥಾನಕ್ಕೆ ಒಟ್ಟು 22 ಅರ್ಜಿಗಳು ಬಂದಿದ್ದವು. ಈ ಪೈಕಿ ಜಯದೇವ ಆಸ್ಪತ್ರೆಯಲ್ಲಿಯೇ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಚ್.ಶ್ರೀನಿವಾಸ್ ಹಾಗೂ ಮೈಸೂರು ಜಯದೇವ ಕೇಂದ್ರದ ನಿರ್ದೇಶಕ ಡಾ.ಕೆ.ಎಸ್.ಸದಾನಂದ, ಡಾ.ದಿನೇಶ್ ಸಹಿತ ಹಲವರ ಹೆಸರುಗಳು ನಿರ್ದೇಶಕ ಹುದ್ದೆ ರೇಸ್ನಲ್ಲಿದ್ದವು.
ಇನ್ನು ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆ ಪ್ರಭಾರಿ ಆಗಿ ಮುಂದುವರೆಯಲಿದ್ದು, ಶಾಶ್ವತ ನಿರ್ದೇಶಕರ ಆಯ್ಕೆಗೆ ಸರ್ಕಾರ ಹಿಂದೇಟು ಹಾಕಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಕೆರೆ ಮಿತ್ರ ಮತ್ತು ಹಸಿರು ಮಿತ್ರರಾಗಿ ನೋಂದಾಯಿಸಿಕೊಳ್ಳಲು ಅವಧಿ ವಿಸ್ತರಣೆ
ರಾಜ್ಯದಲ್ಲಿ ನಿಗಮ ಮಂಡಳಿಗಳು ಹಾಗೂ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರ ನೇಮಕದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲಾಗುವ ಜಯದೇವ ಹೃದ್ರೋಗ ಸಂಸ್ಥೆಯ ಬೋರ್ಡ್ ಮೀಟಿಂಗ್‌ನಲ್ಲಿ ಅಧಿಕೃತವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಬೋರ್ಡ್ ಮೀಟಿಂಗ್ ನಡೆದು, ಶಾಶ್ವತ ನಿರ್ದೇಶಕರ ಆಯ್ಕೆಯವರೆಗೆ ಜಯದೇವ ಆಸ್ಪತ್ರೆಗೆ ಡಾ. ರವೀಂದ್ರನಾಥ್ ಅವರು ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
“ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಮಾಡುವ ಗುರಿ ಇತ್ತು. ಅದು 100ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ” ಎಂದು ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
“ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಆಸ್ಪತ್ರೆಯಲ್ಲಿ 300 ಹಾಸಿಗೆ ಇತ್ತು. ಇದೀಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ” ಎಂದಿದ್ದಾರೆ.